ಲೇಖಕ ಡಾ.ಕೆ.ಪಿ.ನಟರಾಜ್‌ಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

Update: 2018-05-31 16:08 GMT

ಉಡುಪಿ, ಮೇ 31: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ 2018 ಬರಹಗಾರ ಡಾ.ಕೆ.ಪಿ.ನಟರಾಜ್‌ಗೆ ಲಭಿಸಿದೆ. ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳ ಗೊಂಡಿರುತ್ತದೆ.

ಸುಬ್ರಾಯ ಚೊಕ್ಕಾಡಿ, ಜಯರಾಮ ಕಾರಂತ ಹಾಗೂ ಪ್ರೊ. ಮುರಳೀಧರ ಉಪಾಧ್ಯ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ.ಕೆ.ಪಿ ನಟರಾಜ್ ಅವರ ‘ನಿತ್ಯವೂ ನಿನ್ನೊಡನೆ’ ಕಾವ್ಯ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 

ಡಾ.ಕೆ.ಪಿ.ನಟರಾಜ್ ಎಂ.ಎ ಪದವೀಧರರಾಗಿದ್ದು, ಕನ್ನಡ ವಿವಿ ಹಂಪಿಯಿಂದ ಡಿ.ಲಿಟ್ (ಕುವೆಂಪು ಚಿಂತನೆಯ ಅಧ್ಯಾತ್ಮ ಕುರಿತು ಮಹಾ ಪ್ರಬಂಧಕ್ಕೆ) ಪದವಿಯನ್ನು ಪಡೆದಿದ್ದಾರೆ. ‘ಓ ಕಪ್ಪು ಹುಡುಗಾ’, ‘ಮತ್ತೆ ನನ್ನ ಆಕಾಶ’, ‘ಶಿವೆ ಶಿವೆ’ ಪ್ರಕಟಿತ ಕವನ ಸಂಕಲನಗಳು. ‘ಪ್ರತಿಮಾ ಮೋಹ’ ಇವರ ವಿಮರ್ಶಾ ಸಂಕಲನ. ‘ಮಧುರ ಚೆನ್ನೈ’ ಸಂಪಾದಿತ ಕೃತಿ. ಪ್ರಸ್ತುತ ಇವರು ತುಮಕೂರಿನ ಮಹೇಶ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ.

ಇದೇ ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆ.ಪಿ ನಟರಾಜ್‌ಗೆ ಪ್ರಶಸಿತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News