×
Ad

ವಸತಿ ಯೋಜನೆ ಫಲಾನುವಿಗಳಿಗೊಪರಿವರ್ತನೆ ಅಗತ್ಯವಿಲ್ಲ: ಗ್ರಾಪಂಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋಟ ಆಗ್ರಹ

Update: 2018-05-31 21:43 IST

ಉಡುಪಿ, ಮೇ 31: ಗ್ರಾಪಂಗಳಲ್ಲಿ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ಆವಾಸ್ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮನೆ ಕಟ್ಟುವಾಗ ಸಂಬಂಧಿತ ನಿವೇಶನದ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಬಗ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಬಗ್ಗೆ ಗ್ರಾಪಂಗಳಿಗೆ ಸೂಕ್ತ ನಿರ್ದೇಶವನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಗ್ರಾಪಂಗಳು, ಗ್ರಾಪಂ ಗಳ ಪಿಡಿಓಗಳು ವಸತಿ ಯೋಜನೆಯ ಫಲಾನುಭವಿಗಳಿಗೆ ಭೂ ಪರಿವರ್ತನೆಗೆ ಒತ್ತಾಯಿಸುತ್ತಿರುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದವರು ತಿಳಿಸಿದ್ದು, ಈ ಕುರಿತು ತನ್ನ ನಿಲುವನ್ನು ಸ್ಪಷ್ಟ ಪಡಿಸಿದರು.

ಕರ್ನಾಟಕ ಸರಕಾರದ 2011ರ ಜ.11ರ ಆದೇಶ, ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ 2012ರ ಫೆ.13ರ ಆದೇಶದಂತೆ ಗ್ರಾಪಂಗಳಲ್ಲಿ ಯಾವುದೇ ವಸತಿ ಯೋಜನೆಯಡಿ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಾಗ ನಿವೇಶನದ ಭೂ ಪರಿವರ್ತನೆ ಅಗತ್ಯವಿಲ್ಲ. ಇದರ ಬದಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಾಜೀವ್ ಗಾಂಧಿ ವಸತಿ ನಿಗಮವು ಹೊರಡಿಸಿದ ನಿಗದಿತ ನಮೂನೆಯಲ್ಲಿ ಧೃಢೀಕರಿಸಿದರೆ ಭೂ ಪರಿವರ್ತನೆ ಅವಶ್ಯಕತೆಯೇ ಇಲ್ಲವೆನ್ನುವುದನ್ನು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದವರು ವಿವರಿಸಿದ್ದಾರೆ.

 ಈ ವಿಚಾರದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲ ಕೋಟ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News