×
Ad

ಬೆಳ್ತಂಗಡಿ: ಕೋವಿಯಿಂದ ಸಿಡಿದ ಗುಂಡು; ಓರ್ವ ಮೃತ್ಯು

Update: 2018-05-31 22:00 IST

ಬೆಳ್ತಂಗಡಿ, ಮೇ 31: ನೆರಿಯ ಗ್ರಾಮದ ದೇವಗಿರಿ ಎಂಬಲ್ಲಿ ಆಕಸ್ಮಿಕವಾಗಿ ಕೋವಿಯೊಂದು ಸಿಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿ ನೆರಿಯ ಗ್ರಾಮದ ದೇವಗಿರಿ ನಿವಾಸಿ ಜೇಮ್ಸ್ (48) ಎಂದು ಗುರುತಿಸಲಾಗಿದೆ.

ಅವರು ನೆರಿಯ ಗ್ರಾಮದ ಬೈಜು ಎಸ್ಟೇಟಿನ ಮೇಲ್ವಿಚಾರಕನಾಗಿದ್ದು, ಬುಧವಾರ ರಾತ್ರಿ ಮನೆಯಿಂದ ಕೋವಿಯೊಂದಿಗೆ ಎಸ್ಟೇಟ್ ಕಡೆಗೆ ಹೋಗಿದ್ದರು ಎನ್ನಲಾಗಿದೆ. ಬೆಳಗ್ಗಾದರೂ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ನೆರಿಯ ಗ್ರಾಮದ ಅಂಬಟೆ ಮಲೆ ಪ್ರದೇಶದ ನದಿಯ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪ ಕೋವಿಯೂ ಪತ್ತೆಯಾಗಿದೆ. ಕೋವಿಯೊಂದಿಗೆ ತೆರಳುತ್ತಿದ್ದ ವೇಳೆ ನದಿಯ ಸಮೀಪದಲ್ಲಿ  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಈ ಸಂದರ್ಭ ಅವರ ಬಳಿ ಇದ್ದ ಡಬಲ್ ಬ್ಯಾರಲ್ ಗನ್ ಸಿಡಿದಿದ್ದು ಗಂಭೀರ ಗಾಯಗೊಂಡ ಅವರು  ಮೃತಪಟ್ಟಿರಬೇಕು ಎಂದು ಅಂದಾಜಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಧರ್ಮಸ್ಥಳ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪುತ್ರ ಜಿಬಿನ್ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದು ಮೃತ ಜೇಮ್ಸ್‌ನ ಸಹೋದರ ಬಿನೋಯ್ ಎಂಬವರಿಗೆ ಸೇರಿದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News