ಜೂ.1ರಿಂದ ಮೀನುಗಾರಿಕೆಗೆ ಎರಡು ತಿಂಗಳು ರಜೆ
ಮಂಗಳೂರು, ಮೇ 31: ರಾಜ್ಯ ಸರಕಾರವು ಪಶ್ಚಿಮ ಕರಾವಳಿ ತೀರದಲ್ಲಿ ಜೂ.1ರಿಂದ ಜು.31ರವರೆಗೆ (61 ದಿನ) ಮೀನುಗಾರಿಕೆಗೆ ನಿಷೇಧ ಹೇರಿವೆ. ಹಾಗಾಗಿ ಜೂ.1ರಿಂದ ಮೀನುಗಾರಿಕೆ ನಡೆಯುತ್ತಿಲ್ಲ. ಅದರಂತೆ ಗುರುವಾರ ಸಂಜೆಯಿಂದಲೇ ಮಂಗಳೂರು ದಕ್ಕೆಯಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿದೆ.
ಆಗಸ್ಟ್ 1ರಿಂದ ಮೇ 31ರವರೆಗೆ ಮೀನುಗಾರಿಕೆಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಜೂ.1ರಿಂದ ಜು.31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರುವುದು ವಾಡಿಕೆಯಾಗಿದೆ. ಜೂ.1ರಿಂದ ಜು.31 ಮೀನುಗಳ ಸಂತಾನೋತ್ಪತ್ತಿಯ ಅವಧಿಯಾಗಿದ್ದು, ಅದಕ್ಕಾಗಿ ಸರಕಾರ ನಿಷೇಧ ಹೇರುತ್ತದೆ. ಆದರೆ 9.9 ಎಚ್‌ಪಿ ಇಂಜಿನ್ ಸಾಮರ್ಥ್ಯದ ದೋಣಿ ಬಳಸಿ ಅಂದರೆ ಸಮುದ್ರ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ವ್ಯಾಪ್ತಿಯೊಳಗೆ ಮೀನುಗಾರಿಕೆ ಮಾಡಬಹು ದಾಗಿದೆ. ಅದಲ್ಲದೆ ‘ಕರೆ ಫಿಶ್ಶಿಂಗ್’ (ಕಡಲ ತೀರದ ಮೀನುಗಾರಿಕೆ)ನ್ನೂ ಕೂಡ ಮಾಡಬಹುದಾಗಿದೆ.
ನಿಷೇಧದ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಮೀನುಗಳ ಸಂತತಿ ನಾಶಕ್ಕೆ ಯಾವುದೇ ಅಡ್ಡಿ ಇಲ್ಲ. ಇನ್ನು ಮಳೆಗಾಲದಲ್ಲಿ ಗಾಳಿ, ಮಳೆ, ಚಂಡಮಾರುತ, ಸಮುದ್ರಗಳ ಅಬ್ಬರದಿಂದ ಮೀನುಗಾರಿಕೆಗೆ ತೊಂದರೆಯಾಗುವ ಕಾರಣದಿಂದ ನಿಷೇಧ ಹೇರುವುದು ರೂಢಿಯಾಗಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳದಲ್ಲೂ ಕೂಡ ಈ ಸಂದರ್ಭ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಈ ಮಧ್ಯೆ ಆಂಧ್ರಪ್ರದೇಶ, ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ಎಪ್ರಿಲ್ 1ರಿಂದ ಮೇ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಅಲ್ಲಿ ಜೂನ್ 1ರಂದು ಮೀನುಗಾರಿಕೆ ಆರಂಭಗೊಳ್ಳಲಿದೆ. ಹಾಗಾಗಿ ಮಂಗಳೂರು ಸಹಿತ ಪಶ್ಚಿಮ ಕರಾವಳಿ ತೀರಕ್ಕೆ ಪೂರ್ವ ಕರಾವಳಿ ತೀರದಿಂದ ಮೀನನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಸಾಗಾಟದ ವೆಚ್ಚ ದುಬಾರಿಯಾದುದರಿಂದ ಸಹಜವಾಗಿ ಮೀನುಗಳ ಬೆಲೆಯು ಈ ಸಂದರ್ಭ ಗಗನಕ್ಕೆ ಏರುತ್ತಿವೆ.
ಅಂದಹಾಗೆ ಮೀನುಗಾರರು ಕೆಲವು ವರ್ಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀನುಗಾರಿಕೆಯ ನಿಷೇಧದ ಅವಧಿಯಲ್ಲಿ ‘ಲಂಗರು’ ಸಮಸ್ಯೆ ಸಾಮಾನ್ಯವಾಗಿತ್ತು. ಅಂದರೆ ಒಂದೆಡೆ ಜಾಗದ ಕೊರತೆ ಎದುರಿಸಿದರೆ ಇನ್ನೊಂದೆಡೆ ಮಳೆಗಾಲದಲ್ಲಿ ಲಂಗರು ಹಾಕಿದ ಬೋಟುಗಳು ಪರಸ್ಪರ ತಾಗಿ ಭಾರೀ ಹಾನಿಯಲ್ಲದೆ ಬೋಟ್ ಮಾಲಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.
ಮೀನುಗಾರರು ಎದುರಿಸುವ ಸಮಸ್ಯೆಗೆ ಸಂಬಂಧಿಸಿದಂತೆ ವಿವಿಧ ಮೀನುಗಾರರ ಸಂಘಟನೆಗಳು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ದೂರಿಕೊಂಡಿದ್ದಾರೆ.
ಮೀನುಗಾರಿಕೆಗೆ ನಿಷೇಧ ಹೇರಿದ ಹಿನ್ನಲೆಯಲ್ಲಿ ಬಹುತೇಕ ಬೋಟು ದಡ ಸೇರಿದ್ದು, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಹಲವರು ಊರಿನತ್ತ ಪಯಣ ಬೆಳೆಸಿದರೆ ಇನ್ನು ಕೆಲವರು ದೋಣಿಗಳ ದುರಸ್ತಿ, ಬಲೆ ತಯಾರಿಕೆ ಇತ್ಯಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ.