×
Ad

ವಿದ್ಯುತ್ ನೀಡಿ ನೀರಿನ ಸಮಸ್ಯೆ ಪರಿಹರಿಸಿ: ಮೆಸ್ಕಾಂ ಅಧಿಕಾರಿಗೆ ಪುತ್ತೂರು ನಗರಸಭಾ ಅಧ್ಯಕ್ಷೆ ಮನವಿ

Update: 2018-05-31 22:19 IST

ಪುತ್ತೂರು, ಮೇ 31: ಪುತ್ತೂರು ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ಬೇಕಾದಷ್ಟು ನೀರು ಶೇಖರಣೆಯಾಗಿದ್ದರೂ ಕಳೆದ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ಸಮಸ್ಯೆಯಾಗಿದೆ. ಈ ಹಿನ್ನಲೆಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ನೀರು ಒದಗಿಸಿ ಕೊಡುವಂತೆ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಮೆಸ್ಕಾಂನ ಅಧೀಕ್ಷಕ ಅಭಿಯಂತರರಿಗೆ ಮನವಿ ಮಾಡಿದ್ದಾರೆ.

ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿರುವ ಕಿಂಡಿ ಅಣೆಕಟ್ಟಿನಿಂದ ನೀರು ಮೇಲೆತ್ತಿ ನೆಕ್ಕಿಲಾಡಿ ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿ ಅಲ್ಲಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ದಶಕದ ಹಿಂದೆ ಎಕ್ಸ್‌ಪ್ರೆಸ್ ಫೀಡರ್ ಅಳವಡಿಸಲಾಗಿತ್ತು. ನೆಕ್ಕಿಲಾಡಿಯ ಎಚ್‌ಟಿಪಿ23 ಹಾಗೂ ಎಚ್‌ಟಿಪಿ 10 ಸ್ಥಾವರಗಳಿಂದ ಎಕ್ಸ್‌ಪ್ರೆಸ್ ಫೀಡರ್ ಅಳವಡಿಸಲಾಗಿದ್ದು, ಇದರಿಂದ ನಿರಂತರ ನೀರು ಪೂರೈಕೆಗೆ ವಿದ್ಯುತ್ ಬಳಸಿಕೊಳ್ಳಲಾಗುತ್ತದೆ. ಈ ಎಕ್ಸ್‌ಪ್ರೆಸ್ ಫೀಡರ್‌ನಿಂದ ಬೇರೆ ಯಾವುದೇ ಉದ್ದೇಶಕ್ಕೆ ವಿದ್ಯುತ್ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಇದೀಗ ಮೆಸ್ಕಾಂ ಉಪ್ಪಿನಂಗಡಿ, ಕಾಂಚನ ಲೈನ್‌ಗೆ ಸಂಪರ್ಕ ಕಲ್ಪಿಸಿ ಆ ಭಾಗಕ್ಕೆ ವಿದ್ಯುತ್ ಪೂರೈಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ನಗರಸಭೆ ಆರೋಪಿಸಿದೆ.

ಕಳೆದ ಹಲವು ದಿನಗಳಿಂದ ನೆಕ್ಕಿಲಾಡಿ ಜಲಸ್ಥಾವರಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಮೆಸ್ಕಾಂಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನ ಸಿಕ್ಕಿಲ್ಲ. ಈ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ಪುತ್ತೂರು ನಗರಕ್ಕೆ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ಹೀಗಾಗಿ ನೆಕ್ಕಿಲಾಡಿ ಎಕ್ಸ್‌ಪ್ರೆಸ್ ಫೀಡರ್‌ನಿಂದ ಕೊಟ್ಟಿರುವ ಲೈನ್ ತೆರವು ಮಾಡಿ ನೆಕ್ಕಿಲಾಡಿ ಎಚ್‌ಟಿಪಿ- 23 ಹಾಗೂ ಎಚ್‌ಟಿಪಿ -10 ಸ್ಥಾವರಗಳಿಗೆ ಮಾತ್ರ ಸಂಪರ್ಕ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.

ನೆಕ್ಕಿಲಾಡಿ ಎಕ್ಸ್‌ಪ್ರೆಸ್ ಫೀಡರ್‌ನಿಂದ ಉಪ್ಪಿನಂಗಡಿ, ಕಾಂಚನ ಲೈನ್‌ಗೆ ಸಂಪರ್ಕ ಕಲ್ಪಿಸಿರುವುದನ್ನು ಖಚಿತಪಡಿಸಿರುವ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ನರಸಿಂಹ ಅವರು ವಸತಿ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಈ ರೀತಿ ಮಾಡಲಾಗಿದೆ. ಆದರೆ ನಗರಸಭೆಯ ನೀರು ಪೂರೈಕೆಯ ಎಕ್ಸ್‌ಪ್ರೆಸ್ ಫೀಡರ್ ಲೈನ್‌ನಲ್ಲಿ ವಿದ್ಯುತ್ ಕೊರತೆ ಉಂಟಾಗಿಲ್ಲ. ನೀರು ಪೂರೈಕೆಗೆ ಸಮಸ್ಯೆಯಾಗಿದೆ ಎಂಬುದು ನಗರಸಭೆಯ ಅಧ್ಯಕ್ಷರ ಮನವಿ ನೋಡಿದ ಬಳಿಕವಷ್ಟೇ ತಿಳಿಯಿತು. ಈ ಬಗ್ಗೆ ಮೆಸ್ಕಾಂ ಎಂಜಿನಿಯರ್‌ಗಳ ಜತೆ ಸಮಾಲೋಚಿಸಿ ಸಮಸ್ಯೆ ಏನು ಎಂಬುದನ್ನು ಪರಿಶೀಲಿಸಿ, ಪರಿಹರಿಸಿ ಕೊಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News