×
Ad

ವಾಹನ ಕಳವು ಪ್ರಕರಣ: ಐವರು ಬಾಲಕರ ಸಹಿತ 8 ಮಂದಿ ಆರೋಪಿಗಳು ಸೆರೆ

Update: 2018-05-31 23:13 IST

ಮಂಗಳೂರು, ಮೇ 31: ನಗರದಲ್ಲಿ ಐಷಾರಾಮಿ ಬೈಕ್ ಗಳನ್ನು ಟಾರ್ಗೆಟ್ ಮಾಡಿಕೊಂಡು ಕಳವು ಕೃತ್ಯದಲ್ಲಿ ತೊಡಗಿದ್ದರೆನ್ನಲಾದ ಅಂತಾರಾಜ್ಯ ಕಳವು ಆರೋಪಿಗಳನ್ನು ಬಂದರು ಮತ್ತು ಕದ್ರಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಕಣ್ಣೂರು ತಲಿಪರಂಬ ಕೂಟಕಳಂ ನಿವಾಸಿ ಅರ್ಜುನ್ ಕೆ.ಬಿ. (18), ತಲಿಪರಂಬ ಪಯ್ಯವೂರು ನಿವಾಸಿ ರೋಬಿನ್ ಬೇಬಿ (22), ತಲಿಪರಂಬ ಪಳ್ಳಿತೆಟ್ಟು ನಿವಾಸಿ ಟಿಜೋ ಜೋಸೆಫ್ ಆಗಸ್ಟಿನ್ (25) ಹಾಗೂ 5 ಬಾಲಕರು ಸಹಿತ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ರಾಯಲ್ ಎನ್‌ಫೀಲ್ಡ್ ಬುಲೆಟ್, ಕೆಟಿಎಮ್, ಯಮಹಾ, ಬಜಾಜ್ ಪಲ್ಸರ್, ಸುಝಕಿ ಮೋಟಾರು ಸೈಕಲ್ ಕಂಪೆನಿಯ ಐಷಾರಾಮಿ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಗರದ ಕದ್ರಿ, ಬಂದರು ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದರು. ಪ್ರಕರಣದ ಪತ್ತೆಗಾಗಿ ಕದ್ರಿ ಮತ್ತು ಬಂದರು ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿ ವಿಶೇಷ ತಂಡವನ್ನು ರಚಿಸಿ ಒಂದು ವಾರಗಳವರೆಗೆ ನಿರಂತರ ಕಾರ್ಯಾಚರಣೆ ನಡೆಸಿ,  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಮತ್ತು ಬಾಲಕರನ್ನು ವಿಚಾರಿಸಿದಾಗ ಶೋಕಿ ಜೀವನ ನಡೆಸುವ ಸಲುವಾಗಿ, ಸುಲಭದಲ್ಲಿ ಹಣಗಳಿಸುವ ಉದ್ದೇಶದಿಂದ ದುಬಾರಿ ಬೆಲೆಯ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರೆಂದು ಒಪ್ಪಿಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ನಿರ್ದೇಶನ ಮೇರೆಗೆ ಸೆಂಟ್ರಲ್ ವಿಭಾಗದ ಎಸಿಪಿ ಎಂ. ಜಗದೀಶ್ ಅವರ ನೇತೃತ್ವದಲ್ಲಿ ಕದ್ರಿ ಮತ್ತು ಬಂದರು ಠಾಣೆ ಪೊಲೀಸ್ ನಿರೀಕ್ಷಕ ಯೋಗೀಶ್ ಕುಮಾರ್, ಕದ್ರಿ ಪಿಎಸ್‌ಐ ನೀತು ಆರ್.ಗುಡೆ, ಎಎಸ್‌ಐ ಅನಂತ ಮುರುಡೇಶ್ವರ ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಗಿರೀಶ್ ಕುಂಬ್ಳೆ, ಅಜಿತ್ ಮಾಥ್ಯೂ, ಆಶಿತ್ ಕಿರಣ್, ಪ್ರಶಾಂತ್ ಶೆಟ್ಟಿ, ಶಿವಪ್ಪ, ಕಿಶೋರ್ ಸುರೇಂದ್ರ, ದೇವಿ ಪ್ರಸಾದ್, ಸತೀಶ್ ಉತ್ತರ ಠಾಣೆಯ ದಯಾನಂದ, ವಾಸು, ಸುಜನ್, ಬಸವರಾಜ್ ಚಾಲಕರಾದ ಗುರುರಾಜ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News