ಬಂಟ್ವಾಳ: ಕಾರಿನ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಮೂವರ ಸೆರೆ

Update: 2018-06-01 04:37 GMT

ಬಂಟ್ವಾಳ, ಜೂ.1: ಗಸ್ತಿನಲ್ಲಿದ್ದ ಪೊಲೀಸರು ಕಾರು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ ಕಾರೊಂದರ ಮೇಲೆ ಗುಂಡು ಹಾರಿಸಿ ಸಿನಿಮೀಯ ಮಾದರಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮಾರಿಪಳ್ಳ ನಿವಾಸಿ ಸದ್ದಾಂ, ಮಂಗಳೂರು ತಾಲೂಕು ಸುರತ್ಕಲ್ ನಿವಾಸಿ ಮೌಸೀನ್, ಬೊಳ್ಳಾಯಿ ನಿವಾಸಿ ಇರ್ಶಾದ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಫರಂಗಿಪೇಟೆ ಸಮೀಪದ ಅಮ್ಮೆಮಾರು ನಿವಾಸಿಗಳಾದ ಮನ್ಸೂರ್ ಹಾಗೂ ಅಮ್ಮಿ ಎಂಬಿಬ್ಬರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ವಿವರ: ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಂಪು ಸ್ವಿಫ್ಟ್ ಕಾರನ್ನು ಬೆಳ್ತಂಗಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸೂಚನೆಯನ್ನು ಕಡೆಗಣಿಸಿದ ಆರೋಪಿಗಳು ಕಾರನ್ನು ನಿಲ್ಲಿಸದೆ ರಸ್ತೆ ಡಿವೈಡರ್‌ಗೆ ಕಾರನ್ನೇರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪೂಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಕಾರಿನಲ್ಲಿದ್ದವರು ಪೂಂಜಾಲಕಟ್ಟೆ ಪೊಲೀಸರಿಂದಲೂ ತಪ್ಪಿಸಿಕೊಂಡು ಬಂಟ್ವಾಳ ಕಡೆ ಧಾವಿಸಿದ್ದಾರೆ. ಈ ವೇಳೆ ಬೆಳ್ತಂಗಡಿ ಪೊಲೀಸರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ಪೊಲೀಸರು ಬಂಟ್ವಾಳದ ಮಣಿಹಳ್ಳ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಮಣಿಹಳ್ಳದಲ್ಲಿ ಬಂಟ್ವಾಳ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ, ನಗರ ಹಾಗೂ ಗ್ರಾಮಾಂತರ ಎಸ್ಸೈಗಳಾದ ಚಂದ್ರಶೇಖರ ಮತ್ತು ಪ್ರಸನ್ನರಿದ್ದ ತಂಡವು ವೇಗವಾಗಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹಾಯಿಸಲು ಮುಂದಾಗಿ, ಪರಾರಿಯಾಗಲು ಯತ್ನಿಸಿದ್ದಾರೆನ್ನಲಾಗಿದೆ. ಈ ವೇಳೆ ಪೊಲೀಸರು ಕಾರಿನ ಮೇಲೆ ಫೈರಿಂಗ್ ನಡೆಸಿದ ಪೊಲೀಸರು, ಸಿನಿಮೀಯ ಶೈಲಿಯಲ್ಲಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರ ಪೈಕಿ ಮಾರಿಪಳ್ಳ ಸದ್ದಾಂ ಕೊಲೆ, ಕೊಲೆಯತ್ನ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದರೆ, ಮೌಸೀನ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು ೧೪ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನಲ್ಲಿ ಎರಡು ತಲವಾರು, ಒಂದು ರಾಡ್, ಮೆಣಸಿನ ಹುಡಿ, ಮಂಕಿ ಕ್ಯಾಪ್ ಹಾಗೂ ಹಗ್ಗಗಳು ಪತ್ತೆಯಾಗಿವೆ. ಆರೋಪಿಗಳು ಯಾವುದೋ ದರೋಡೆ ಕೃತ್ಯ ನಡೆಸಲು ಕಾರಿನಲ್ಲಿ ಮಾರಕಾಸ್ತ್ರ ಸಹಿತ ಪ್ರಯಾಣ ಬೆಳೆಸಿರುವ ಸಾಧ್ಯತೆಯಿದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News