ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ: ಪೇಜಾವರಶ್ರೀ

Update: 2018-06-01 09:00 GMT

*ಮೋದಿ, ಅಮಿತ್ ಶಾರ ಕಾಂಗ್ರೆಸ್ ಮುಕ್ತ ಇರಾದೆಗೆ ವಿರೋಧ

ಉಡುಪಿ, ಜೂ.1: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ನಿರೀಕ್ಷಿತ ಮಟ್ಟದ ಸಾಧನೆ ಆಗಿಲ್ಲ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯ ಪೇಜಾವರ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಕೆಲವು ಸಾಧನೆ ಆಗಿದೆ. ಆದರೆ ನಾವು ನಿರೀಕ್ಷಿಸಿದ ಮಟ್ಟದ ಸಾಧನೆ ಈ ಸರಕಾರದಿಂದ ಸಾಧ್ಯವಾಗಿಲ್ಲ ಎಂದರು.

ಮೋದಿ ಸರಕಾರ ತಾವು ನೀಡಿದ ಭರವಸೆಗಳನ್ನು ಮಾಡಿಲ್ಲ. ಕಪ್ಪು ಹಣ ತರುವುದಾಗಿ ಹೇಳಿದವರು ತಂದಿಲ್ಲ, ಗಂಗಾ ಶುದ್ಧೀಕರಣವಾಗಿಲ್ಲ. ಆದರೆ ದೇಶದ ಆರ್ಥಿಕ ವಲಯದಲ್ಲಿ ಕೆಲವೊಂದು ನಿಯಂತ್ರಣಗಳನ್ನು ತಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

► ರಾಮ ಮಂದಿರ ದೇಶದ ಆದ್ಯತೆ ಅಲ್ಲ
ಭರವಸೆ ನೀಡಿದಂತೆ ರಾಮ ಮಂದಿರದ ನಿರ್ಮಾಣ ನಾಲ್ಕು ವರ್ಷವಾದರೂ ಪೂರ್ಣಗೊಳ್ಳದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಅದು ದೇಶದ ಆದ್ಯತೆ ಅಲ್ಲ. ರೈತರ ಹಿತರಕ್ಷಣೆ, ದೇಶದ ಆರ್ಥಿಕ ಪರಿಸ್ಥಿತಿಯ ಸದೃಢತೆ ಇಂದಿನ ತುರ್ತು ಅಗತ್ಯ ವಾಗಿದ್ದು, ರಾಮ ಮಂದಿರ ನಿರ್ಮಾಣ ನಂತರ ಬರುತ್ತದೆ. ಅಲ್ಲದೇ ಈ ವಿಷಯ ನ್ಯಾಯಾಲಯದಲ್ಲಿರುವುದರಿಂದ ಅದರ ತೀರ್ಪಿಗಾಗಿ ಕಾಯಬೇಕಾಗಿದೆ ಎಂದು ಪೇಜಾವರಶ್ರೀ ಹೇಳಿದರು.

► ಕಾಂಗ್ರೆಸ್ ಮುಕ್ತಕ್ಕೆ ವಿರೋಧ
ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಇರಾದೆಯನ್ನು ನಾನು ವಿರೋಧಿಸುತ್ತೇನೆ. ಪ್ರಜಾಪ್ರಭುತ್ವ ಸಶಕ್ತವಾಗಿರಲು ಸಮರ್ಥ ವಿರೋಧ ಪಕ್ಷಗಳು ಇರಲೇಬೇಕು ಎಂದ ಶ್ರೀವಿಶ್ವೇಶ ತೀರ್ಥರು ಇದಕ್ಕೆಲ್ಲ ನನ್ನ ಪರಿಹಾರ ಸರ್ವಪಕ್ಷೀಯ ಸರಕಾರವಾಗಿದೆ ಎಂದರು.

►ಇಂದಿನ ಪ್ರಜಾಪ್ರಭುತ್ವ ವಿಕೃತಗೊಂಡಿದೆ

ರಾಜಕೀಯ ಪಕ್ಷಗಳ ಶಾಸಕರ ಆಪರೇಷನ್, ರೆಸಾರ್ಟ್ ರಾಜಕೀಯದಿಂದಾಗಿ ಇಂದಿನ ಪ್ರಜಾಪ್ರಭುತ್ವವೇ ವಿಕೃತಗೊಂಡಿದೆ ಎಂದು ಪೇಜಾವರಶ್ರೀ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಿನ ಯಾವ ಪಕ್ಷಗಳ ಕುರಿತೂ ನನಗೆ ಒಳ್ಳೆಯ ಅಭಿಪ್ರಾಯಗಳಿಲ್ಲ ಎಂದ ಅವರು, ಚುನಾವಣೆಗೆ ಮೊದಲು ಪರಸ್ಪರ ಕಚ್ಚಾಡಿಕೊಂಡು ಜಗಳವಾಡಿದವರು, ಅಸಹ್ಯವಾಗಿ ಬೈದಾಡಿಕೊಂಡವರು ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಇವೆಲ್ಲವೂ ಒಂದು ನಾಟಕದಂತೆ ನಡೆಯುತ್ತಿದೆ. ಇವರಿಗೆ ಪರಸ್ಪರ ಜಗಳವಾಡುವುದೂ ಗೊತ್ತಿದೆ. ಬಳಿಕ ಒಂದಾಗುವುದು ಗೊತ್ತಿದೆ ಎಂದವರು ವ್ಯಂಗ್ಯವಾಡಿದರು.

ಇವನ್ನೆಲ್ಲಾ ನೋಡಿದಾಗ ನನ್ನಲ್ಲಿ ಅತೀ ಆದರ್ಶ ಎನ್ನಬಹುದಾದ ಸೂಚನೆಯೊಂದಿದೆ. ಅದೆಂದರೆ ಸರ್ವಪಕ್ಷಗಳ ಸರಕಾರ. ಕೆಲವು ಕಡೆಗಳಲ್ಲಿ ಇದು ನಡೆದ ಉದಾಹರಣೆಗಳಿವೆ. ಆದರೆ ಭಾರತದ ಇಂದಿನ ಸಂದರ್ಭದಲ್ಲಿ ಅದು ಸಾಧ್ಯವೇ ಎಂಬ ಬಗ್ಗೆ ನನಗೆ ಸಂಶಯವಿದೆ ಎಂದು ಪೇಜಾವರ ಶ್ರೀ ಹೇಳಿದರು.

ಕುಮಾರಸ್ವಾಮಿ ಅನುಭವಿ. ಅವರಿಂದ ಉತ್ತಮ ಆಡಳಿತವನ್ನು ನಾನು ನಿರೀಕ್ಷಿಸುತ್ತೇನೆ. ನಿಜಕ್ಕಾದರೆ ನಾನು ಎಲ್ಲಾ ಸರಕಾರಗಳಿಂದಲೂ ಉತ್ತಮವಾದು ದನ್ನು ನಿರೀಕ್ಷಿಸುತ್ತೇನೆ. ಆದರೆ ಇಂದಿನ ರಾಜಕೀಯವೇ ಕಲುಷಿತಗೊಂಡಿದೆ, ಪ್ರಜಾಪ್ರಭುತ್ವ ವಿಕೃತಗೊಂಡಿದೆ ಎಂದರು.

► ವಿಪಕ್ಷಗಳ ಐಕ್ಯ

ಬಿಜೆಪಿ ಸರಕಾರ ಇತ್ತೀಚೆಗೆ ಜನಪ್ರಿಯತೆ ಕಳೆದುಕೊಳ್ಳುತ್ತಿ ರುವುದರತ್ತ ಅವರ ಗಮನ ಸೆಳೆದಾಗ, ಇಂದು ಬಿಜೆಪಿಯ ಶಕ್ತಿ ವಿಪಕ್ಷಗಳಲ್ಲಿ ಐಕ್ಯವನ್ನು ಮೂಡಿಸಿದೆ. ಹಿಂದೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದಾಗ, ವಿಪಕ್ಷಗಳೆಲ್ಲವೂ ಅವುಗಳ ವಿರುದ್ಧ ಒಂದಾದಂತೆ, ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಒಂದಾಗಿವೆ. ಮುಂದಿನ ಚುನಾವಣೆ ಯಲ್ಲಿ ಇದರ ಪರಿಣಾಮ ಗೋಚರಿಸಬಹುದು ಎಂದವರು ನುಡಿದರು.

ಇನ್ನುಳಿದ ಒಂದು ವರ್ಷದ ಅವಧಿಯಲ್ಲಿ ಮೋದಿ ಸರಕಾರ ಎಂಥ ಆಡಳಿತ ನೀಡುತ್ತದೆ, ಏನೆಲ್ಲಾ ಭರವಸೆ ಈಡೇರಿಸುತ್ತದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

► ಇಫ್ತಾರ್ ಕೂಟಕ್ಕೆ ಚಿಂತನೆ

ಈ ಬಾರಿಯೂ ಪೇಜಾವರ ಮಠದ ವತಿಯಿಂದ ಇಫ್ತಾರ್ ಕೂಟವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಮುಸ್ಲಿಮರೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ. ಮುಸ್ಲಿಮ್ ನಾಯಕರು ಒಪ್ಪಿದರೆ ಮಾಡುತ್ತೇವೆ, ಒತ್ತಾಯವಿಲ್ಲ ಎಂದರು.

ಆದರೆ ಈ ಬಾರಿ ಅವರು ವಿಶೇಷ ಉತ್ಸಾಹ ತೋರಿಸುತ್ತಿಲ್ಲ. ಮಾಡುವುದಾದರೆ ಪೇಜಾವರ ಮಠಕ್ಕೆ ಸೇರಿದ ಗೋವಿಂದ ಕಲ್ಯಾಣಮಂಟಪ ದಲ್ಲಿ ಆಯೋಜಿಸುತ್ತೇವೆ ಎಂದರು.

ನಾವು ಯಾರನ್ನೂ ಓಲೈಸುವುದಿಲ್ಲ. ಹಿಂದು ಮತ್ತು ಮುಸ್ಲಿಮರಲ್ಲಿ ಸೌಹಾರ್ದವನ್ನು ಮೂಡಿಸುವುದೇ ನಮ್ಮ ಉದ್ದೇಶವಾಗಿದೆ. ಹಿಂದುಗಳಿಗೆ ಅನ್ಯಾಯವಾದಾಗ ನಾವು ಖಂಡಿತ ಅದನ್ನು ವಿರೋಧಿಸುತ್ತೇವೆ.

ಹಿಂದೂಗಳಿಗೂ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು. ಇದಕ್ಕಾಗಿ ಬೇಕಿದ್ದರೆ ಸಂವಿಧಾನದಲ್ಲಿ ತಿದ್ದುಪಡಿಗಳಾಗಲಿ ಎಂದು ಹಿಂದೆ ನಾನೊಮ್ಮೆ ಹೇಳಿದ್ದು, ದೊಡ್ಡ ವಿವಾದವಾಗಿತ್ತು. ಸಂವಿಧಾನವನ್ನು ಬದಲಿಸಿ ಎಂದು ನಾನೆಲ್ಲೂ ಹೇಳಿರಲಿಲ್ಲ. ಯಾರ ನಡುವೆಯೂ ತಾರತಮ್ಯ ಧೋರಣೆ ಬೇಡ ಎಂಬುದು ನನ್ನ ಆಶಯವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News