×
Ad

ಹಲವು ಭಾಷೆಗಳ ಪರಿಜ್ಞಾನದಿಂದ ಜ್ಞಾನಾರ್ಜನೆ ಪರಿಪೂರ್ಣ: ಪುತ್ತಿಗೆ ಶ್ರೀ

Update: 2018-06-01 18:16 IST

ಉಡುಪಿ, ಜೂ.1: ಅನೇಕ ಭಾಷೆಗಳ ಪರಿಜ್ಞಾನ ಇದ್ದರೆ ಜ್ಞಾನಾರ್ಜನೆ ಪರಿ ಪೂರ್ಣ ಆಗುತ್ತದೆ. ಕೇವಲ ಒಂದು ಭಾಷೆಯಿಂದ ಸರ್ವ ಜ್ಞಾನ ಪಡೆಯಲು ಸಾಧ್ಯವಿಲ್ಲ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗುಂಡಿಬೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಶಾಲೆಗೆ ಸುಮಾರು 90ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕನ್ನಡ ಭಾಷೆಯ ಜೊತೆ ಆಂಗ್ಲ ಭಾಷೆಯನ್ನು ಕಲಿಯುವುದು ಇಂದಿನ ಅಗತ್ಯ ವಾಗಿದೆ. ಸಂಸ್ಕೃತ ಹಾಗೂ ಆಂಗ್ಲ ಭಾಷೆ ವಿಶಿಷ್ಟವಾದುದು. ಸಂಸ್ಕೃತ ಭಾಷೆ ಶುದ್ಧ ತುಪ್ಪದಂತೆ ಎಲ್ಲ ಸತ್ವವನ್ನು ಹೊಂದಿದ್ದರೆ, ಎಲ್ಲ ಭಾಷೆಗಳ ಶಬ್ದಗಳನ್ನು ಪಡೆದು ಬೆಳೆದಿರುವ ಇಂಗ್ಲಿಷ್ ಭಾಷೆ ಜೇನುತುಪ್ಪದಂತೆ. ಸಂಸ್ಕೃತ ಭಾಷೆಯು ಸುಸ್ಥಿರ ಚೌಕಟ್ಟಿನಲ್ಲಿರುವ ಭಾಷೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಶಾಲೆಯು ದೀಪದ ಬಟ್ಟಲು ಇದ್ದಂತೆ. ಬಟ್ಟಲು ಸರಿಯಾಗಿದ್ದರೆ ದೀಪ ಎಂಬ ಜ್ಞಾನವನ್ನು ಬೆಳಗಲು ಸಾಧ್ಯ. ಹಾಗಾಗಿ ಶಾಲೆ ಉತ್ತಮವಾಗಿದ್ದರೆ ಮಕ್ಕಳಿಗೆ ಉತ್ತಮ ಜ್ಞಾನ ಸಿಗುತ್ತದೆ. ಈ ಶಾಲೆಯಲ್ಲಿ ಮಕ್ಕಳ ಜ್ಞಾನ ದೀಪ ಬೆಳಗಲಿ ಎಂದು ಹಾರೈಸಿದರು.

ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಆಚಾರ್ಯ ಸ್ವಾಗತಿಸಿದರು. ಶಿಕ್ಷಕಿ ರೇಶ್ಮಾ ವರದಿ ವಾಚಿಸಿದರು. ಮುಖ್ಯೋಪಾಧ್ಯಾಯಿನಿ ಕಮಲಿನಿ ಆರ್.ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News