‘ಪ್ರಾಣ ತ್ಯಾಗಕ್ಕೂ ಸಿದ್ಧ, ಹೋರಾಟದಿಂದ ಹಿಂದೆ ಸರಿಯಲ್ಲ’
ಉಡುಪಿ, ಮೇ 22: ಕಮಲೇಶ್ ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸ್ಸುಗಳನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗವು ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ ಇಂದು ಹನ್ನೊಂದನೆ ದಿನಕ್ಕೆ ಕಾಲಿರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಬಸವ ಬಲ್ಲವ, ಗ್ರಾಮೀಣ ಡಾಕ್ ಸೇವಕರು ಕನಿಷ್ಠ ವೇತನದಿಂದ ವಂಚಿತರಾಗಿ ದಿನಕೂಲಿ ನೌಕರರಿಗಿಂತಲೂ ಹೀನಾಯ ಸ್ಥಿತಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಮಲೇಶ್ ಚಂದ್ರ ನೇತೃತ್ವದ ಏಕಸದಸ್ಯ ಸಮಿತಿಯ ಧನಾತ್ಮಕ ಶಿಫಾರಸ್ಸು ಗಳನ್ನು ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಒತ್ತಾಯಿಸಿ ಕಳೆದ 18 ತಿಂಗಳುಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಳೆದ 11 ದಿನಗಳಿಂದ ಧರಣಿ ಮುಷ್ಕರ ನಡೆಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯಲ್ಲ. ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಅಂಚೆ ನೌಕರರ ಸಂಘದ ಗ್ರೂಪ್ ಸಿ ವಿಭಾಗೀಯ ಕಾರ್ಯ ದರ್ಶಿ ಸುರೇಶ್ ಕೆ. ಮಾತನಾಡಿ, ಉಡುಪಿ ಅಂಚೆ ವಿಭಾಗದ ಸುಮಾರು 525 ಮಂದಿ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿ ನಿರತರಾಗಿದ್ದು ಮೇ 22ರಿಂದ 200 ಅಂಚೆ ಕಚೇರಿಗಳು ಬಂದ್ ಆಗಿವೆ. ಇದರಿಂದ ಅಂಚೆ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸರಕಾರದ ಯೋಜನೆಗಳು ಫಲಾ ನುಭವಿಗಳಿಗೆ ಲಭಿಸದೆ ಪರಿತಪಿಸುತ್ತಿದ್ದಾರೆ. ಅಂಚೆ ಪತ್ರಗಳು ಸಾರ್ವಜನಿಕರಿಗೆ ಬಟವಾಡೆಯಾಗದೆ ಬಾಕಿ ಉಳಿದಿವೆ. ಆದುದರಿಂದ ಸರಕಾರ ಕೂಡಲೇ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಹಿರಿಯಣ್ಣ ಮಡಿವಾಳ, ಕಾರ್ಯದರ್ಶಿ ಅಶ್ವತ್ ಕುಮಾರ್, ಕೋಶಾ ಧಿಕಾರಿ ಎನ್.ಭಾಸ್ಕರ್, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಕೆ.ಸಂತೋಷ್ ಮಧ್ಯಸ್ಥ, ಕೋಶಾಧಿಕಾರಿ ರಮಾ ನಾಥ್ ಆರ್. ಮೊಲಿ ಮೊದಲಾದವರು ಉಪಸ್ಥಿತರಿದ್ದರು.