ಸುವಾರೆಝ್ ಸೈನಿಕರಿಗೊಂದು ಜಾಣ ಕವಚ !
ಉಡುಪಿ, ಜೂ.1: ಶತ್ರುಗಳೊಂದಿಗೆ ಹೋರಾಡುವಾಗ ಸೈನಿಕರು ಸೂಕ್ತ ವಾದ ಪ್ರಥಮ ಚಿಕಿತ್ಸೆ ಅಥವಾ ಆರೈಕೆ ಸಿಗದೆ ಹುತಾತ್ಮರಾಗುತ್ತಿರುತ್ತಾರೆ. ಹೀಗೆ ಅನೇಕ ಯೋಧರನ್ನು ಕಳೆದುಕೊಂಡಿದ್ದೇವೆ. ಸುವಾರೆಝ್ ಈ ಸಮಸ್ಯೆಗೆ ಪರಿಹಾರ ರೂಪವಾಗಿ ಸೇನೆಗೆ ಅನುಕೂಲವಾಗುವ ಈ ಸಾಧನವನ್ನು ಬಂಟ ಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ನಾಗರಾಜ ಭಟ್ ಮಾರ್ಗದರ್ಶನ ದಲ್ಲಿ ನಾಮದೇವ ನಾಯಕ್ ಮತ್ತು ನರೇಂದ್ರ ಕಿಣಿ ಕಂಡುಕೊಂಡಿದ್ದಾರೆ.
ಈ ಸಾಧನವು ಯೋಧರನ್ನು ಜಾಣ ಕೈಪಟ್ಟಿ ಮತ್ತು ಮುಂದುವರಿದ ವೈದ್ಯ ಕೀಯ ಚಿಕಿತ್ಸಾ ತಂತ್ರಜ್ಞಾನದ ಸಹಾಯದಿಂದ ಉಳಿಸುವುದಕ್ಕೆ ಸಹಕಾರಿ ಯಾಗುತ್ತದೆ. ಸೈನಿಕರ ಹೃದಯಬಡಿತವನ್ನು ಆರೋಗ್ಯದ ಮೂಲ ಮಾನದಂಡ ವಾಗಿ ಪರಿಗಣಿಸುವ ಈ ಸಾಧನವು ಅದರಲ್ಲಿ ಆಗುವ ಯಾವುದೇ ವ್ಯತ್ಯಯವನ್ನು ಗುರುತಿಸುತ್ತದೆ. ಹೃದಯ ಬಡಿತವು ಅಪಾಯಕಾರಿ ಮಟ್ಟವನ್ನು ತಲುಪಿದಾಗ ಅಥವಾ ಸೈನಿಕರು ತನ್ನ ಕವಚದಲ್ಲಿರುವ ಗುಂಡಿಯನ್ನು ಅದುಮಿದಾಗ ಆ ಸೈನಿಕನಿರುವ ತಾಣದ ಮಾಹಿತಿ ಮತ್ತು ಅವನ ಆರೋಗ್ಯದ ಬಗೆಗಿನ ಪ್ರಾಥಮಿಕ ವರದಿಯನ್ನು ಸಂಪರ್ಕ ಜಾಲ ಕೇಂದ್ರದಲ್ಲಿರುವ ಅಧಿಕೃತ ಶಿಕ್ಷಾರ್ಥಿ ಗಳಿಗೆ ಕಳುಹಿಸುತ್ತದೆ. ಪ್ರತಿಯಾಗಿ ಇವರು ದೂರಮಾಪನ ತಂತ್ರಜ್ಞಾನವನ್ನು ಬಳಸಿ ಸೈನಿಕನಿರುವ ಸ್ಥಳಕ್ಕೆ ಕ್ವಾಡ್‌ಕಾಪ್ಟರನ್ನು ಕಳುಹಿಸುತ್ತಾರೆ.
ಇದರಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಲ್ಲ ವ್ಯವಸ್ಥೆ ಇದೆ. ಪರಿಣತ ವೈದ್ಯರ ತಂಡವು ಸ್ಥಳವನ್ನು ತಲುಪುವವರೆಗೆ ರೋಬೋಟಿಕ್ ಕೈಗಳು ಸೈನಿಕನನ್ನು ಕ್ರಿಯಾಶೀಲನಾಗಿ ಇರಲು ಸಹಕರಿಸುತ್ತದೆ. ಈ ಸಾಧನವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಹೃದಯಬಡಿತವನ್ನು ಅಳೆಯುವ, ಸಂದೇಶ ಕಳುಹಿಸುವ, ವಿವಿಧ ಸಾಧನಗಳನ್ನು ನಿಯಂತ್ರಿಸುವ ಗ್ರಾಹಕಗಳು ಮತ್ತು ಇತರ ಯಂತ್ರ ಭಾಗಗಳನ್ನು ಯೋಧರು ಧರಿಸುವ ರಕ್ಷಾಕವಚದಲ್ಲಿ ಅಳವಡಿಸಲಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.