×
Ad

ಕನ್ನಡವನ್ನು ತಿರಸ್ಕರಿಸಿದರೆ ತಾಯಿಯನ್ನು ತಿರಸ್ಕರಿಸಿದಂತೆ : ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

Update: 2018-06-01 19:18 IST

ಮೂಡುಬಿದಿರೆ, ಜೂ.1: ಕನ್ನಡ ನಮ್ಮ ತಾಯಿ ಭಾಷೆ. ಇಂಗ್ಲಿಷ್ ಮಲತಾಯಿ ಭಾಷೆ. ಕನ್ನಡವನ್ನು ತಿರಸ್ಕರಿಸಿ ಇಂಗ್ಲಿಷ್‌ಗೆ ಉತ್ತೇಜಿನ ನೀಡುವುದು ಸರಿಯಲ್ಲ. ಕನ್ನಡವನ್ನು ತಿರಸ್ಕರಿಸಿದರೆ ಅದು ನಾವು ನಮ್ಮ ತಾಯಿಯನ್ನು ತಿರಸ್ಕರಿಸಿದಂತೆ ಎಂದು ಪೇಜಾವರ ಮಠದ  ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಸೇವಾಂಜಲಿ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಕಡಲಕೆರೆ ಸೈಂಟ್ ಇಗ್ನೇಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶು ಮಂದಿರದ ನೂತನ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಕನ್ನಡ ಮಾಧ್ಯಮದಲ್ಲಿ ಕಲಿಸುವುದರೊಂದಿಗೆ ಇಂಗ್ಲಿಷ್ನ್ನು ಕಲಿಸುವ ಮೂಲಕ ದೇಶದಲ್ಲಿರುವ ಮಾನವ ಸಮಾಜದ ಅಭಿವೃದ್ಧಿಯಾಗುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವಾಗಲಿ ಎಂದು ಹಾರೈಸಿದರು.

ಸಂಸದ ನಳಿನ್‌ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆತ್ಮ ಸ್ಥೈರ್ಯ ಬೆಳೆಸುವ, ಸಂಸ್ಕರ ನೀಡುವ ಶಿಕ್ಷಣ ದೊರೆತರೆ ಉತ್ತಮ ಸಾಧನೆ ಮಾಡಲು ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಕೊರತೆಯಿಲ್ಲ. ಆದರೆ ಮೌಲ್ಯಾಧಾರಿತ ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳ ಕೊರತೆಯಿದೆ. ಜಿಲ್ಲೆಯಲ್ಲಿ ಬೆರಳೆಣಿಕೆಯ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳಿದ್ದು ಅಂತಹ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು. ಈ ಶಾಲೆಯ ಅಭಿವೃದ್ಧಿಗೆ ಸಂಸದರ ನಿದಿಯಿಂದ ಅನುದಾನ ಈಗಾಗಲೇ ರೂ 2ಲಕ್ಷವನ್ನು ನೀಡಲಾಗಿದೆ. ಮುಂದೆ ರೂ 3 ಲಕ್ಷವನ್ನು ನೀಡುವುದರೊಂದಿಗೆ ಖಾಸಗಿ ಕಂಪೆನಿಗಳ ಸಿಆರ್‌ಎಫ್ ಫಂಡ್‌ನಿಂದಲೂ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ ಆದರ್ಶವಾದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆದರೆ ಅಂತಹ ಶಾಲೆಗೆ ಬೇಡಿಕೆಯಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಎಂದೂ ಸೋಲಾಗಬಾರದು. ಸರ್ಕಾರ ತಾಲೂಕಿಗೊಂದು ಆದರ್ಶ ಕನ್ನಡ ಮಾಧ್ಯಮ ಶಾಲೆ ತೆರೆಯಬೇಕು ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಕನ್ನಡ ಮಾಧ್ಯಮ ಶಾಲೆಯಿಂದ ಲೋಕಜ್ಞಾನ ಸಿಗುತ್ತದೆ. ಆಂಗ್ಲ ಮಾಧ್ಯಮ, ಕೇಂದ್ರೀಯ ಶಾಲೆಗಳ ನಡುವಿನ ಪೈಪೋಟಿಯಿಂದ ಕನ್ನಡ ಮಾಧ್ಯಮ ಶಾಲೆಗಳು ಸೊರಗುತ್ತಿವೆ ಎಂದರು.

ಪುರಸಭಾ ಸದಸ್ಯ ಹನೀಫ್ ಅಲಂಗಾರ್ ಭಾಗವಹಿಸಿದ್ದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಸಂಘಚಾಲಕ ಡಾ.ವಾಮನ ಶೆಣೈ ದೀಕ್ಷಾವಿಧಿ ಪ್ರಭೋಧನೆ ಮಾಡಿದರು. ಸೇವಾಂಜಲಿ ಎಜುಕೇಶನ್ ಟ್ರಸ್ಟ್‌ನ ಸಂಚಾಲಕ ಪ್ರೊ.ಎಂ. ವಾಸುದೇವ ಭಟ್ ಅಧ್ಯಕ್ಷತೆ ವಹಿಸಿ ನೂತನ ಕಟ್ಟಡದ ಮಾಹಿತಿ ನೀಡಿದರು.

ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ವಿ.ಜಯರಾಮ್ ರಾವ್ ವಂದಿಸಿದರು. ಉಪನ್ಯಾಸಕ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News