×
Ad

ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ-ತುಟ್ಟಿಭತ್ತೆ ನೀಡಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ

Update: 2018-06-01 20:04 IST

ಮಂಗಳೂರು, ಜೂ.1: ರಾಜ್ಯ ಸರಕಾರ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಬೀಡಿ ಕಾರ್ಮಿಕರಿಗೆ 1 ಸಾವಿರ ಬೀಡಿಗೆ 210 ರೂ. ಕನಿಷ್ಟ ಕೂಲಿ ಹಾಗೂ ಪಾಯಿಂಟಿಗೆ 0.04 ಪೈಸೆಯಂತೆ ತುಟ್ಟಿ ಭತ್ತೆಯನ್ನು ನೀಡಬೇಕು ಎಂದು ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್‌ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಶುಕ್ರವಾರ ಬೀಡಿ ಕಾರ್ಮಿಕರು ಮೆರವಣಿಗೆ ನಡೆಸಿ ನಗರದ ಕದ್ರಿಯಲ್ಲಿರುವ ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ.ನ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಸಹಾಯಕ ಕಾರ್ಮಿಕ ಆಯುಕ್ತರನ್ನು ಸಿಐಟಿಯು ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಲು ಒತ್ತಾಯಿಸಿತು.

ಈ ಸಂದರ್ಭ ಮಾತನಾಡಿದ ಬೀಡಿ ಫೆಡರೇಶನ್‌ನ ಅಧ್ಯಕ್ಷ ವಸಂತ ಆಚಾರಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ನಡೆಸಿರುವ ಹೋರಾಟದ ಫಲವಾಗಿ ರಾಜ್ಯ ಸರಕಾರ ಕನಿಷ್ಟ ವೇತನ ಕಾಯ್ದೆಯಡಿ ನೇಮಿಸಿರುವ ತ್ರಿಪಕ್ಷೀಯ ಸಮಿತಿಯು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಕನಿಷ್ಟ ಕೂಲಿಯನ್ನು ಪ್ರಕಟಿಸಿತ್ತು. ಅದಕ್ಕೆ ಸಹಿ ಹಾಕಿರುವ ಮಾಲಕರು ಎಪ್ರಿಲ್ 1 ರಿಂದ ಜಾರಿ ಮಾಡುವುದಾಗಿ ಹೇಳಿದ್ದರೂ ಇತರ ಕಾರಣಗಳನ್ನು ಮುಂದಿಟ್ಟು ವಿತರಿಸದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆಪಾದಿಸಿದರು.

ಕಾರ್ಮಿಕರ ಶ್ರಮದಿಂದಲೇ ನಡೆಯುವ ಈ ಕೈಗಾರಿಕೆಯ ಪುನಶ್ಚೇತನಕ್ಕೆ ಕಾರ್ಮಿಕರಿಗೆ ಆರ್ಥಿಕ ಪೋತ್ಸಾಹ ನೀಡುವ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳಿಂದ ಎಲ್ಲ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲೆ ವಿಪರೀತ ಬೆಲೆ ಏರಿಕೆಯಾಗಿದೆ. ಅದನ್ನು ಸರಿದೂಗಿಸಿ ಬದುಕಲು ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆಯನ್ನು ನ್ಯಾಯೋಚಿತವಾಗಿ ನೀಡಬೇಕು ಎಂದು ವಸಂತ ಆಚಾರಿ ಹೇಳಿದರು.

ಫೆಡರೇಶನ್ ಉಪಾಧ್ಯಕ್ಷ ಯು.ಬಿ.ಲೋಕಯ್ಯ, ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪದ್ಮಾವತಿ ಶೆಟ್ಟಿ, ಬಾಬು ದೇವಾಡಿಗ, ಯು.ಜಯಂತ ನಾಯ್ಕಿ, ಸದಾಶಿವ ದಾಸ್, ಜಯಂತಿ ಶೆಟ್ಟಿ, ಗಂಗಯ್ಯ ಅಮೀನ್, ಬಾಬು ಪಿಲಾರ್, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ಕೃಷ್ಣಪ್ಪಸಾಲಿಯಾನ್, ಭಾರತಿ ಬೋಳಾರ್, ಜಯಲಕ್ಷ್ಮಿ, ಪದ್ಮನಾಭ, ಪುಷ್ಪಾ ಶಕ್ತಿನಗರ, ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News