ಗುಜರಾತ್: 1 ಕೋಟಿ ರೂ. ಮೌಲ್ಯದ ಅಮಾನ್ಯ ನೋಟುಗಳು ವಶ
ವಡೋದರಾ,ಜೂ.1: ನಗರದ ಮಂಜಾಲ್‌ಪುರ ಪ್ರದೇಶದಲ್ಲಿ, ನಾಲ್ಕು ಮಂದಿಯಿಂದ ಸುಮಾರು 1 ಕೋಟಿ ರೂ.ಮುಖಮೌಲ್ಯದ ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ವಡೋದರಾ ಪೊಲೀಸರು ಶುಕ್ರವಾರ ಸಂಜೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಅಮಾನ್ಯಗೊಂಡ ನೋಟುಗಳು 1 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯನ್ನು ಹೊಂದಿದ್ದು, ಅವುಗಳನ್ನು ಕಾರೊಂದರ ಡಿಕ್ಕಿಯಲ್ಲಿ ಬಚ್ಚಿಡಲಾಗಿತ್ತೆಂದು ವಡೋದರಾ ಪೊಲೀಸ್ ಆಯುಕ್ತ ಮನೋಜ್ ಶಶಿಧರ್ ತಿಳಿಸಿದ್ದಾರೆ.
ಅಮಾನ್ಯನೋಟುಗಳನ್ನು ಹೊಂದಿದ ಆರೋಪಿಗಳ ಪೈಕಿ ಕೀರ್ತಿ ಗಾಂಧಿ ಎಂಬಾತ ಸ್ಥಳೀಯ ಮೋಟಾರ್ ಗ್ಯಾರೇಜೊಂದರ ಮಾಲಕ. ಇನ್ನುಳಿದ ಮೂವರು ಆರೋಪಿಗಳನ್ನು ಭರೂಚ್‌ನ ಕರ್ಸಾನ್ ಪರಮಾರ್, ರಾಜೇಂದ್ರ ರಂಜಿತ್‌ಸಿನ್ಹಾ ರಾಜ್ ಹಾಗೂ ಮನೋಜ್ ಅಲಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಕೀರ್ತಿಗಾಂಧಿ ಹಳೆಯ ನೋಟುಗಳನ್ನು ವಿನಿಮಯ ಮಾಡುವ ದಂಧೆ ನಡೆಸುತ್ತಿದ್ದಾನೆಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೇಲೆ ನಿಗಾವಿರಿಸಿದ್ದಾರೆ. ಶುಕ್ರವಾರ ಸಂಜೆ, ವಿನಿಮಯಕ್ಕಾಗಿ ಉಳಿದ ಮೂವರು ಆರೋಪಿಗಳು ಕೀರ್ತಿಗಾಂಧಿಯ ಬಳಿಗೆ, ಕಾರಿನಲ್ಲಿ ಹಳೆಯ ಕರೆನ್ಸಿ ನೋಟುಗಳನ್ನು ವಿನಿಮಯಕ್ಕಾಗಿ ತರುತ್ತಿದ್ದಾಗ, ಪೊಲೀಸರು ಅಡ್ಡಗಟ್ಟಿದ್ದರು ಮತ್ತು ಕಾರಿನಲ್ಲಿದ್ದ ನೋಟುಗಳನ್ನು ವಶಪಡಿಸಿಕೊಂಡರೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ನೋಟು ವಿನಿಮಯ ದಂಧೆಯಲ್ಲಿ ರಾಜು ಎಂಬ ಇನ್ನೋರ್ವ ಆರೋಪಿ ಕೂಡಾ ಶಾಮೀಲಾಗಿದ್ದಾನೆಂದು ವಿಚಾರಣೆ ವೇಳೆ ಬಂಧಿತ ಆರೋಪಿಗಳು ತಿಳಿಸಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರೋಪಿಗಳ ವಿರುದ್ಧ 2017ರ ನಿರ್ದಿಷ್ಟಪಡಿಸಿದ ಬ್ಯಾಂಕ್ ನೋಟುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ವಿಶೇಷ ಕಾರ್ಯಾಚರಣೆಯ ತಂಡ (ಎಸ್‌ಓಜಿ)ಕ್ಕೆ ಹಸ್ತಾಂತರಿಸಲಾಗಿದೆ.