ರಾಜಸ್ಥಾನ: ಆನೆಗಳಿಗೆ ಚಿತ್ರಹಿಂಸೆ, ತನಿಖೆಗೆ ಕೋರ್ಟ್ ಆದೇಶ
ಜೈಪುರ,ಜೂ.1: ರಾಜಸ್ಥಾನದ ಆಂಬರ್ ಕೋಟೆಯಲ್ಲಿ ಪ್ರವಾಸಿಗರಿಗೆ ವಿಹಾರ ಸಂಚಾರಕ್ಕಾಗಿ ಬಳಸಲಾಗುವ ಆನೆಗಳನ್ನು ಹಿಂಸಿಸಲಾಗುತ್ತಿದೆಯೆಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಇಲ್ಲಿನ ನ್ಯಾಯಾಲಯವೊಂದು ಪೊಲೀಸ್ ಇಲಾಖೆಗೆ ಆದೇಶಿಸಿದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ಹಾಗೂ ಹಿಂಸೆಯಲ್ಲಿ ಶಾಮೀಲಾಗಿರುವ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೂಚನೆಯನ್ನು ನೀಡಿದೆ.
ಆಂಬರ್ ಕೋಟೆಯಲ್ಲಿರುವ ಸುಮಾರು 193 ಆನೆಗಳನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಹಾಗೂ ಅವುಗಳ ಮೇಲೆ ನಿರ್ದಿಷ್ಟಪಡಿಸಲಾದ ಹೊರೆಯ ಮಿತಿಗಿಂತಲೂ ಅಧಿಕ ಭಾರವನ್ನು ಸಾಗಿಸಲಾಗುತ್ತಿದೆ ಹಾಗೂ ಅವು ವಿವಿಧ ಬಗೆಯ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿವೆಯೆಂದು ದೂರಿ, ಪೀಪಲ್ಸ್ ಫಾರ್ ಅನಿಮಲ್ಸ್ ’ ಸಂಘಟನೆಯ ಟ್ರಸ್ಟಿ ಗೌರಿ ವೌಲೇಖಿ ಎಂಬವರು ನ್ಯಾಯಾಲಯದ ಮೊರೆಹೋಗಿದ್ದರು. ಇತ್ತೀಚೆಗೆ ಪ್ರಕಟಿಸಲಾದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ವರದಿ(ಎಡಬ್ಲುಬಿಐ)ಯನ್ನು ಕೂಡಾ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. 2017ರ ಮಾರ್ಚ್‌ನಿಂದ 2018ರ ಮಾರ್ಚ್ ಅವಧಿಯಲ್ಲಿ ಎಡಬ್ಲುಬಿಐ, ಹಾಥಿ ಗಾಂವ್‌ನಲ್ಲಿ 102 ಆನೆಗಳ ಆರೋಗ್ಯ ತಪಾಸಣೆ ನಡೆಸಿದಾಗ, ಅವುಗಳಲ್ಲಿ ಸುಮಾರು 19 ಆನೆಗಳು ಭಾಗಶಃ ಅಥವಾ ಸಂಪೂರ್ಣ ಅಂಧತ್ವದಿಂದ ನರಳುತ್ತಿರುವುದು ಪತ್ತೆಯಾಗಿತ್ತು.
ಉಳಿದ ಹತ್ತು ಆನೆಗಳು ಕ್ಷಯಪೀಡಿತವಾಗಿದ್ದರೆ, 28 ಆನೆಗಳು 50 ವರ್ಷಕ್ಕೂ ಅಧಿಕ ಪ್ರಾಯದ್ದಾಗಿದ್ದವು. ಆಂಬರ್ ಪೋರ್ಟ್ ಪ್ರದೇಶದ ಆನೆಗಳು ತೀವ್ರವಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದೂ ಕಂಡುಬಂದಿದೆ. ಅಲ್ಲದೆ 47 ಆನೆಗಳ ದಂತಗಳನ್ನು ಕತ್ತರಿಸಿರುವುದೂ ಪತ್ತೆಯಾಗಿತ್ತು. ಇಲ್ಲಿನ ಆನೆಗಳ ಮೇಲೆ 200 ಕೆ.ಜಿ.ಗೂ ಅಧಿಕ ಹೊರೆಯನ್ನು ಹೊರಿಸಲಾಗುತ್ತಿದೆಯೆಂದು ವರದಿ ಬಹಿರಂಗಪಡಿಸಿತ್ತು.