ಪಾಲ್‌ಘರ್ ಉಪಚುನಾವಣೆ: ಶಿವಸೇನೆಯ ಸೋಲಿಗೆ ಇವಿಎಂ ದೂರಿದ ಉದ್ಧವ್
ಮುಂಬೈ, ಜೂ.1: ಪಾಲ್‌ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಜೊತೆಗಾರ ಪಕ್ಷ ಬಿಜೆಪಿಯ ಕೈಯಲ್ಲಿ ಪರಾಭವನ್ನನುಭವಿಸಿರುವುದಕ್ಕೆ ಚುನಾವಣಾ ಆಯೋಗ ಕಾರಣವೆಂದು ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ದೂಷಿಸಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರದಲ್ಲಿ ಶಿವಸೇನೆಯ ಭವಿಷ್ಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಪಾಲ್‌ಘರ್ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಗಾವಿತ್ ಅವರು ಶಿವಸೇನಾ ಅಭ್ಯರ್ಥಿ ಶ್ರೀನಿವಾಸ್ ವಾಂಗಾ ಅವರನ್ನು 29 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಯ ಹಾಲಿ ಸಂಸದ ಚಿಂತಾಮನ್ ವಾಂಗಾ ಅವರ ನಿಧನದಿಂದ ತೆರವಾಗಿದ್ದ ಪಾಲ್‌ಘರ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಮಹಾರಾಷ್ಟ್ರ ಸರಕಾರದಲ್ಲಿ ಜೊತೆಗಾರ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ಈ ಚುನಾವಣೆಯಲ್ಲಿ ಮುಖಾಮುಖಿಯಾಗಿ ಸ್ಪರ್ಧಿಸಿದ್ದವು. ಶಿವಸೇನೆಯು ವಾಂಗಾ ಅವರ ಪುತ್ರ ಶ್ರೀನಿವಾಸ್‌ರನ್ನೇ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಇಂದು ದಾದರ್‌ನಲ್ಲಿರುವ ಸೇನಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ಪಾಲ್‌ಘರ್ ಚುನಾವಣೆಯಲ್ಲಿ ತನ್ನ ಪಕ್ಷದ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಚುನಾವಣೆಯಲ್ಲಿ ಶಿವಸೇನೆಯ ಸೋಲಿಗೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಲೋಪ ಕಾರಣವೆಂದು ಅವರು ಆರೋಪಿಸಿದರು. ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣದ ಅಮಿಷವೊಡ್ಡುತ್ತಿದ್ದಾರೆಂದು ಶಿವಸೇನೆ ಆರೋಪಿಸಿದ್ದರೂ, ಚುನಾವಣಾ ಆಯೋಗ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅವರು ದೂರಿದರು.
ಪಾಲ್‌ಘರ್ ಉಪಚುನಾವಣೆಯ ಮರುಮತ ಎಣಿಕೆಯಾಗಬೇಕು ಹಾಗೂ ಅಲ್ಲಿಯ ತನಕ ಚುನಾವಣಾ ಆಯೋಗವು ಫಲಿತಾಂಶವನ್ನು ಘೋಷಿಸಕೂಡದೆಂದು ಶಿವಸೇನೆ ಚುನಾವಣಾ ಆಯೋಗವನ್ನು ಆಗ್ರಹಿಸಿತ್ತು. ಆದರೆ ಚುನಾವಣಾ ಆಯೋಗವು ಅದನ್ನು ತಳ್ಳಿಹಾಕಿತ್ತು .