ಮುಕ್ತ ವ್ಯಾಪಾರಕ್ಕಾಗಿ ಏಶ್ಯ ಜಲಪ್ರದೇಶಗಳಲ್ಲಿ ನೌಕಾಯಾನ ಸ್ವಾತಂತ್ರ ಖಾತರಿ ಅಗತ್ಯ

Update: 2018-06-01 17:17 GMT

ಸಿಂಗಾಪುರ, ಜೂ. 1: ಮುಕ್ತ ವ್ಯಾಪಾರಕ್ಕಾಗಿ ಏಶ್ಯದ ಜಲಪ್ರದೇಶಗಳಲ್ಲಿ ನೌಕಾಯಾನ ಸ್ವಾತಂತ್ರವನ್ನು ಖಾತರಿಪಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ತನ್ನ ಮೂರು ಆಗ್ನೇಯ ಏಶ್ಯ ದೇಶಗಳ ಪ್ರವಾಸದ ಕೊನೆಯ ಹಂತದಲ್ಲಿ ಮೋದಿ ಗುರುವಾರ ಸಿಂಗಾಪುರಕ್ಕೆ ಆಗಮಿಸಿದರು. ಇದಕ್ಕೂ ಮೊದಲು ಅವರು ಇಂಡೋನೇಶ್ಯ ಮತ್ತು ಮಲೇಶ್ಯ ದೇಶಗಳಿಗೆ ಭೇಟಿ ನೀಡಿರುವುದನ್ನು ಸ್ಮರಿಸಬಹುದಾಗಿದೆ.

 ಸಾಗರಗಳ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಲಯವನ್ನು ಬಲಪಡಿಸುವ ಉದ್ದೇಶದ ‘ಆ್ಯಕ್ಟ್ ಈಸ್ಟ್’ (ಪೂರ್ವದೊಂದಿಗೆ ವ್ಯವಹರಿಸಿ) ನೀತಿಯ ಭಾಗವಾಗಿ ಮೋದಿ ಈ ವಾರ ಆಗ್ನೇಯ ಏಶ್ಯ ದೇಶಗಳ ಪ್ರವಾಸ ಕೈಗೊಂಡಿದ್ದಾರೆ.

‘‘ಸಾಗರ ಮಾರ್ಗ ಭದ್ರತೆಗೆ ಸಂಬಂಧಿಸಿದಂತೆ, ನಿಯಮಾಧಾರಿತ ವ್ಯವಸ್ಥೆಯೊಂದಕ್ಕೆ ನಾವು ಹೊಂದಿರುವ ಬದ್ಧತೆಯನ್ನು ನಾವು ಪುನರುಚ್ಚರಿಸಿದೆವು’’ ಎಂದು ಮೋದಿ ನುಡಿದರು.

ಸಿಂಗಾಪುರ ಪ್ರಧಾನಿ ಲೀ ಹಸಿಯನ್ ಲೂಂಗ್ ಜೊತೆ ಮಾತುಕತೆ ನಡೆಸಿದ ಬಳಿಕ, ಮೋದಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

‘‘ಈ ಪ್ರದೇಶದಲ್ಲಿ ಮುಕ್ತ, ನ್ಯಾಯೋಚಿತ ಮತ್ತು ಪಾರದರ್ಶಕ ಸಾಗರ ಮಾರ್ಗ ವ್ಯಾಪಾರವನ್ನು ಹೊಂದುವುದಕ್ಕೆ ನಾವು ಒಪ್ಪಿದೆವು’’ ಎಂದರು.

ಸಿಂಗಾಪುರದಲ್ಲಿ ಪ್ರಧಾನಿ ಮೋದಿ ವಾರ್ಷಿಕ ಶಾಂಗ್ರಿ-ಲಾ ಮಾತುಕತೆ ಭದ್ರತಾ ವೇದಿಕೆಯಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ.

ಭಾರತ ಮತ್ತು ಸಿಂಗಾಪುರಗಳ ನೌಕಾಪಡೆಗಳ ನಡುವೆ, ಸಮರಾಭ್ಯಾಸ ಸೇರಿದಂತೆ ಹೆಚ್ಚಿನ ಸಹಕಾರವನ್ನು ಏರ್ಪಡಿಸುವುದಕ್ಕೆ ಸಂಬಂಧಿಸಿದ ಒಪ್ಪಂದದ ಬಗ್ಗೆಯೂ ಮೋದಿ ಸಿಂಗಾಪುರದ ಪ್ರಧಾನಿ ಜೊತೆ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News