×
Ad

ಉಡುಪಿ: ಕನಿಷ್ಠ ಕೂಲಿ, ತುಟ್ಟಿ ಭತ್ತೆ ಬಾಕಿ ಪಾವತಿಗೆ ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಧರಣಿ

Update: 2018-06-02 16:31 IST

ಉಡುಪಿ, ಜೂ.2: ಕನಿಷ್ಟ ಕೂಲಿ ಮತ್ತು ತುಟ್ಟಿ ಭತ್ತೆ ಬಾಕಿ ಪಾವತಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಇಂದು ಉಡುಪಿಯ ಭಾರತ್ ಬೀಡಿ ಡಿಪೋ ಎದುರು ಧರಣಿ ನಡೆಸಿದರು.

ಕನಿಷ್ಠ ವೇತನ ಸಲಹಾ ಮಂಡಳಿಯು 2018ರ ಎ.1ರಿಂದ 1000 ಬೀಡಿ ಕಟ್ಟುವುದಕ್ಕೆ ತುಟ್ಟಿ ಭತ್ಯೆ ಸೇರಿ 220.52ರೂ. ಕೂಲಿ ನೀಡಬೇಕೆಂದು ಆದೇಶ ಹೊರಡಿಸಿದೆ. ಆದರೆ ಎರಡು ತಿಂಗಳು ಕಳೆದರೂ ಹೊಸ ವೇತನವನ್ನು ಕಂಪೆನಿ ಗಳು ಜಾರಿಗೆ ತಂದಿಲ್ಲ. ಹಿಂದೆ ನೀಡುತ್ತಿದ್ದ ಕೂಲಿ ಮಾತ್ರ ಜಾರಿಯಲ್ಲಿದೆ. ಅದರಲ್ಲೂ 12.75ರೂ. ಬಾಕಿ ಇರಿಸಲಾಗಿದೆ ಎಂದು ಫೆಡರೇಶನ್ ಜಿಲ್ಲಾಧ್ಯಕ್ಷ ಮಹಾಬಲ ವಡೇರಹೊಬಳಿ ದೂರಿದರು.

ಬೀಡಿ ಮಾಲಕರು ಕಾರ್ಮಿಕರಿಗೆ ಸಾವಿರ ಬೀಡಿಗೆ 12.75ರೂ. ಹೆಚ್ಚುವರಿ ತುಟ್ಟಿ ಭತ್ತೆ ನೀಡದಂತೆ ಸರಕಾರದಿಂದ ಆದೇಶ ತಂದಿದ್ದರು. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಈ ಆದೇಶ ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಸರಕಾರ ಅದನ್ನು ಹಿಂಪಡೆಯಿತು. ಆದರೂ ಈವರೆಗೆ ಮಾಲಕರು ತುಟ್ಟಿಭತ್ಯೆ ಯನ್ನು ನೀಡುತ್ತಿಲ್ಲ. ಇದರಿಂದಾಗಿ ದಿನಕ್ಕೆ ಸುಮಾರು 800 ಬೀಡಿ ಕಟ್ಟುವ ಕಾರ್ಮಿಕರಿಗೆ ಈವರೆಗೆ 9ಸಾವಿರ ರೂ. ಹೆಚ್ಚು ಬಾಕಿ ಇರಿಸಿದಂತಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಲಕ್ಷ್ಮಣ್ ಕೆ., ಸಿಐಟಿಯು ಮುಖಂಡರಾದ ಕೆ.ಶಂಕರ್, ವಿಶ್ವ ನಾಥ ರೈ, ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ಎಚ್.ನರಸಿಂಹ, ವಿಠಲ ಪೂಜಾರಿ, ಕವಿರಾಜ್, ವೆಂಕಟೇಶ್ ಕೋಣಿ, ನಳಿನಿ ಮಲ್ಪೆ, ಸುಗಂಧಿ, ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬೀಡಿ ಕಾರ್ಮಿಕರು ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ್ರತಿಭಟನಾ ಮೆರವಣಿಗೆ ನಡೆಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News