ಏಷ್ಯನ್ ಜೂನಿಯರ್ ಕ್ರೀಡಾಕೂಟಕ್ಕೆ ಆಳ್ವಾಸ್‌ನ ಐದು ಮಂದಿ ಕ್ರೀಡಾಪಟುಗಳು ಆಯ್ಕೆ
Update: 2018-06-02 17:39 IST
ಮೂಡುಬಿದಿರೆ, ಜೂ. 2: ಜಪಾನ್‌ನ ಗಿಫುನಲ್ಲಿ ಜೂನ್ 6ರಿಂದ 10ರವರೆಗೆ ನಡೆಯಲಿರುವ 18ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 5 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಪದಕದ ಸಾಧನೆಯನ್ನು ಮಾಡಿದ್ದು, ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿರುತ್ತಾರೆ.
100 ಮೀ.ನಲ್ಲಿ ಪ್ರಜ್ವಲ್ ಮಂದಣ್ಣ, ಶಾಟ್‌ಪುಟ್‌ನಲ್ಲಿ ಆಶಿಷ್, 400 ಮೀ. ನಲ್ಲಿ ಶುಭ ವಿ, ಶಾಟ್‌ಪುಟ್‌ನಲ್ಲಿ ಅನಾಮಿಕ ಹಾಗೂ ಎತ್ತರ ಜಿಗಿತದಲ್ಲಿ ಅಭಿನಯ ಶೆಟ್ಟಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದನೆ ವ್ಯಕ್ತಪಡಿಸಿದ್ದಾರೆ.