×
Ad

ಉಡುಪಿ ಗ್ರಾಮೀಣ ಅಂಚೆ ನೌಕರರಿಂದ ಪ್ರತಿಭಟನಾ ಮೆರವಣಿಗೆ

Update: 2018-06-02 20:15 IST

ಉಡುಪಿ, ಮೇ 22: ಕಮಲೇಶ್‌ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸ್ಸುಗಳನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗವು ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ 12ನೆ ದಿನವಾದ ಇಂದು ಕೂಡ ಮುಂದುವರೆದಿದ್ದು, ಈ ಪ್ರಯುಕ್ತ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರಧಾನ ಅಂಚೆ ಕಚೇರಿಯಿಂದ ಹೊರಟ ಮೆರವಣಿಗೆಯು ಚಿತ್ತರಂಜನ್ ಸರ್ಕಲ್, ಡಯಾನ ಸರ್ಕಲ್, ಕೋರ್ಟ್ ಹಿಂಬದಿ ರಸ್ತೆ, ಕೆ.ಎಂ.ಮಾರ್ಗ, ಕ್ಲಾಕ್ ಟವರ್ ಮಾರ್ಗವಾಗಿ ಸಾಗಿ ಬಂದು ಪ್ರಧಾನ ಅಂಚೆ ಕಚೇರಿ ಎದುರು ಸಮಾಪ್ತಿಗೊಂಡಿತು. ಮೆರವಣಿಗೆಯುದ್ದಕ್ಕೂ ಧರಣಿನಿರತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಬಸವ ಬಲ್ಲವ, ಕಾರ್ಯದರ್ಶಿ ಕೆ.ಸಂತೋಷ್ ಮಧ್ಯಸ್ಥ, ಕೋಶಾಧಿಕಾರಿ ರಮಾನಾಥ್ ಆರ್.ಮೊಲಿ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಸುರೇಶ್ ಕೆ., ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಹಿರಿಯಣ್ಣ ಮಡಿ ವಾಳ, ಕಾರ್ಯದರ್ಶಿ ಅಶ್ವತ್ ಕುಮಾರ್, ಕೋಶಾಧಿಕಾರಿ ಎನ್.ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಮೇ 22ರಿಂದ ಉಡುಪಿ ಅಂಚೆ ವಿಭಾಗದ 200 ಅಂಚೆ ಕಚೇರಿಗಳ ಸುಮಾರು 525 ಮಂದಿ ಗ್ರಾಮೀಣ ಅಂಚೆ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಗ್ರಾಮೀಣ ಅಂಚೆ ಕಚೇರಿಗಳು ಬಂದ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News