ಶಿರ್ವ-ಪಿಲಾರ್ ಚರ್ಚಿನ ಧರ್ಮಗುರು ಅಧಿಕಾರ ಸ್ವೀಕಾರ
ಉಡುಪಿ, ಜೂ.2: ಶಿರ್ವ ಪಿಲಾರಿನ ನೂತನ ದೇವಾಲಯವನ್ನು ಸ್ವತಂತ್ರ ಧರ್ಮಕೇಂದ್ರವಾಗಿ ಉಡುಪಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಘೋಷಿಸಿದ್ದು ಇದರ ಪ್ರಥಮ ಧರ್ಮಗುರುಗಳಾಗಿ ಬಸ್ರೂರು ಧರ್ಮಕೇಂದ್ರದಿಂದ ವರ್ಗಾವಣೆಗೊಂಡ ವಂ.ವಿಶಾಲ್ ಲೋಬೊ ಅಧಿಕಾರ ಸ್ವೀಕರಿಸಿದರು.
ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಆಗಮಿಸಿದ್ದ ಉಡುಪಿ ಶೋಕಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೋನ್ಸಾ ನೂತನ ಧರ್ಮಗುರುವಿನ ಅಧಿಕಾರ ಸ್ವೀಕಾರದ ವಿಧಿವಿಧಾನಗಳನ್ನು ನೇರವೇರಿ ಸಿದರು. ಶಿರ್ವ ಧರ್ಮಕೇಂದ್ರದ ಧರ್ಮಗುರು ಹಾಗೂ ಪಿಲಾರ್ ಚರ್ಚಿನ ಉಸ್ತುವಾರಿಗಳಾಗಿದ್ದ ವಂ.ಸ್ಟ್ಯಾನಿ ತಾವ್ರೊ ನೂತನ ಧರ್ಮಗುರುಗಳಿಗೆ ಚರ್ಚಿನ ದಾಖಲೆಗಳನ್ನು ಮತ್ತು ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ ಲೆಕ್ಕಪತ್ರದ ವಿರಗಳನ್ನು ಹಸ್ತಾಂತರಿಸಿದರು.
ಧರ್ಮಾಧ್ಯಕ್ಷರ ಪ್ರತಿನಿಧಿ ನೂತನ ಧರ್ಮಗುರುಗಳಿಗೆ ಚರ್ಚಿನ ಪರಮ ಪ್ರಸಾದ ಪೆಟ್ಟಿಗೆ ಕೀಲಿಕೈ ಹಸ್ತಾಂತರಿಸುವ ಮೂಲಕ ಅಧಿಕೃತ ಧರ್ಮಗುರುವಿನ ಅಧಿಕಾರವನ್ನು ಹಸ್ತಾಂತರಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಡೊನ್ ಬೋಸ್ಕೊ ಸಾಲೇಶಿಯನ್ ಸಂಸ್ಥೆಯ ಧರ್ಮಗುರು ವಂ.ಕಿರಣ್ ನಜ್ರೆತ್, ವಂ.ಸ್ಟ್ಯಾನಿ ತಾವ್ರೊ ಅವರನ್ನು ಸನ್ಮಾನಿಸಲಾಯಿತು. ವಿಲ್ಸನ್ ಡಿಸೋಜ ಸ್ವಾಗತಿಸಿ ಪಿಲಾರ್ ಚರ್ಚಿನ ಆಡಳಿತ ಸಮಿತಿಯ ಸಂಯೋಜಕ ವಲೇರಿಯನ್ ಮಚಾದೊ ವಂದಿಸಿದರು. ಡೋನ್ ಬೋಸ್ಕೊ ಶಾಲೆಯ ಪ್ರಾಂಶುಪಾಲ ವಂ.ಮಹೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.