×
Ad

ಎರ್ಮಾಳಿನಲ್ಲಿ ರಿಕ್ಷಾ ಢಿಕ್ಕಿ: ಕಬಡ್ಡಿ ಆಟಗಾರ ಮೃತ್ಯು

Update: 2018-06-02 20:32 IST

ಪಡುಬಿದ್ರೆ, ಜೂ. 2 : ಇಲ್ಲಿನ ಎರ್ಮಾಳು ತೆಂಕ ಮೀನುಗಾರಿಕಾ ರಸ್ತೆಯಲ್ಲಿ ಶುಕ್ರವಾರ ರಾತ್ರಿ ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜ್ಯಮಟ್ಟದ ಕಬಡ್ಡಿ ಆಟಗಾರನೋರ್ವ ಮೃತಪಟ್ಟಿದ್ದಾರೆ. 

ಮೃತ ಕ್ರೀಡಾಪಟುವನ್ನು ಉಚ್ಚಿಲ ಸಮೀಪದ ಎರ್ಮಾಳು ಬಡಾಗ್ರಾಮದ ಭಾರತ್ ನಗರ ನಿವಾಸಿ ಸುಜಿತ್ ಆರ್ ಮೆಂಡನ್ (21) ಎಂದು ಗುರುತಿಸಲಾಗಿದೆ.

ಮೀನುಗಾರ ವೃತ್ತಿಯ ರಮೇಶ್ ಮೆಂಡನ್, ಯಶೋಧ ದಂಪತಿಯ ಪುತ್ರ. ಶುಕ್ರವಾರ ರಾತ್ರಿ ಸುಮಾರು 12.30ರ ವೇಳೆಗೆ ಮನೆಗೆ ಹಿಂತಿರುಗುವ ವೇಳೆಯಲ್ಲಿ ತೆಂಕ ಎರ್ಮಾಳು ಅಮೀನ್ ಮೂಲಸ್ಥಾನದ ಬಳಿ ಪಡುಬಿದ್ರೆಯತ್ತ ಸಂಚರಿಸುತಿದ್ದ ರಿಕ್ಷಾ ಬೈಕ್‌ಗೆ ಢಿಕ್ಕಿ ಹೊಡೆಯಿತು. ಅಪಘಾತದಿಂದ ಸುಜಿತ್ ಸಮುದ್ರ ಕಿನಾರೆಯಲ್ಲಿನ ಕಲ್ಲಿನ ಮೇಲೆ ಉರುಳಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಸ್ಥಳೀಯರು ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಉಡುಪಿ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಮೇಶ್ ಮೆಂಡನ್, ಪ್ರತಿಭಾವಂತ ಕಬಡ್ಡಿ ಆಟಗಾರನಾಗಿದ್ದು, ಸುಜಿತ್ ಪದವಿ ಪೂರ್ವ ವಿಭಾಗದಲ್ಲಿ ರಾಜ್ಯ ಮಟ್ಟವನ್ನು, ಕಾಲೇಜು ವಿಭಾಗದಲ್ಲಿ ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ್ದರು. ಪಂಜಾಬಿನಲ್ಲಿ ನಡೆದ ಪಂದ್ಯಾಟದಲ್ಲಿ ರಾಜ್ಯ ತಂಡದಲ್ಲಿ ಗುರುತಿಸಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸುಜಿತ್, ಸ್ಥಳೀಯ ಕಬಡ್ಡಿ ತಂಡಗಳ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದರು. ಅಲ್ಲದೆ ಹೊರ ಜಿಲ್ಲೆಗಳ ಆಹ್ವಾನಿತ ಕ್ಲಬ್ ತಂಡದಲ್ಲಿಯೂ ಆಟಗಾರನಾಗಿ ಭಾಗವಹಿಸಿ ತಂಡದ ಗೆಲುವಿಗೆ ಕಾರಣೀಕರ್ತನಾಗಿದ್ದರು. ಅವರು ಮುನ್ನಡೆಸುತಿದ್ದ ಸ್ಥಳೀಯ ತಂಡವು ಪ್ರಶಸ್ತಿಗಳನ್ನು ಗಳಿಸುವ ಜೊತೆಗೆ ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದರು. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News