×
Ad

ಮಂಗಳೂರು ವಿವಿಯಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಉದ್ಘಾಟನೆ; ಕುಲಪತಿ ಪ್ರೊ.ಕೆ.ಭೈರಪ್ಪರಿಗೆ ಸನ್ಮಾನ

Update: 2018-06-02 20:42 IST

ಕೊಣಾಜೆ, ಜೂ. 2: ದೇಶದಲ್ಲಿ ವಿಜ್ಞಾನಿಗಳ ಕೊರತೆ ಎದ್ದು ಕಾಣುತ್ತದೆ. ಇಂದು ಹೆಚ್ಚಾಗಿ ದೇಶದಲ್ಲಿ ಶಿಕ್ಷಣ ಪಡೆದು ಹೊರದೇಶಗಳಿಗೆ ಹೋಗಿ ಅದೆಷ್ಟೋ ಜನರು ವಿಜ್ಞಾನಿಗಳಾಗಿ ಸೇವೆ ಸಲ್ಲಿಸಿ ಅಲ್ಲಿಗೆ ಕೊಡುಗೆ ನೀಡುತ್ತಿದ್ದಾರೆ, ಆದರೆ ನಾವು ನಮ್ಮ ದೇಶದಲ್ಲಿ ಶಿಕ್ಷಣ ಪಡೆದು ಇಲ್ಲಿಯೇ ಸೇವೆ ಸಲ್ಲಿಸಿ ದೇಶಕ್ಕಾಗಿ ಕೊಡುಗೆ ಸಲ್ಲಿಸಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಓರ್ವ ವಿಜ್ಞಾನಿಯಾಗಿದ್ದುಕೊಂಡು ಪ್ರೊ.ಕೆ.ಭೈರಪ್ಪ ಅವರು ಹಲವಾರು ಯೋಜನೆಗಳ ಮೂಲಕ ಆಡಳಿತ ನಡೆಸಿ ಯಶಸ್ವಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಆದಿಚುಂಚನಗಿರಿ ಮಠದ ಪೂಜ್ಯ ಡಾ.ನಿರ್ಮಾಲಂದನಾಥ ಸ್ವಾಮೀಜಿ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಹಾಸ್ಟೆಲ್, ಲೆಕ್ಚರ್ ಕಾಂಪ್ಲೆಕ್ಸ್, ಎನಿಮಲ್ ಹೌಸ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಉದ್ಘಾಟನೆ ಹಾಗೂ ಸೋಮವಾರದಂದು ನಿವೃತ್ತರಾಗಲಿರುವ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಯಾವ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿ ಇದೆಯೋ ಅಥವಾ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅವರಲ್ಲಿ ಕಾರ್ಯಕ್ಷಮತೆಯೂ ಹೆಚ್ಚಿರುತ್ತದೆ. ಮಾತ್ರವಲ್ಲದೆ ಯಾವ ಕ್ಷೇತ್ರವನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು. ಹಾಗೆಯೇ ಪ್ರೊ.ಕೆ.ಭೈರಪ್ಪ ಅವರು ಆಧ್ಯಾತ್ಮಿಕ ವ್ಯಕ್ತಿಯೂ ಹೌದು, ಉತ್ತಮ ವಿಜ್ಞಾನಿಯೂ ಹೌದು ಹಾಗೆಯೇ ಮಂಗಳೂರು ವಿವಿಯಲ್ಲಿ ಹಲವಾರು ಕುಲಪತಿಯಾಗಿ ಅಭಿವೃದ್ಧಿ ಯೋಜನೆಗಳ ಮೂಲಕ ಉತ್ತಮ ಆಡಳಿತಗಾರನೂ ಹೌದು ಎಂಬುದನ್ನು ನಿರೂಪಿಸಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎನ್.ಆರ್.ಶೆಟ್ಟಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕೇತ್ರದಲ್ಲಿ ಭಾರತವು ಇಂದು ಉತ್ತಮ ಸಾಧನೆ ಮಾಡುತ್ತಿದೆ. ಪ್ರೊ.ಕೆ.ಭೈರಪ್ಪ ಅವರು ಓರ್ವ ಅಂತಾರಾಷ್ಟ್ರಿಯ ಮಟ್ಟದ ವಿಜ್ಞಾನಿಯಾಗಿದ್ದು ಕೊಂಡು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ವಿವಿಯ ಕುಲಪತಿಯಾಗಿ ಸಮರ್ಥ ಆಡಳಿತದ ಮೂಲಕವೂ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆಂಡ್ ಸಾಫ್ಟ್ ಮ್ಯಾಟರ್ ಸೈಯನ್ಸ್‌ಸ್‌ನ ಪ್ರೊ.ಕಟ್ಟೇರ ಸುರೇಶ್ ಅವರು ಅಭಿನಂದನಾ ಭಾಷಣ ಮಾಡಿದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವ ಅವರು ಮಾತನಾಡಿ, ಪ್ರೊ.ಕೆ,ಭೈರಪ್ಪ ಅವರು ಕುಲಪತಿಯಾಗಿ ಬಂದ ನಂತರ ಮಂಗಳೂರು ವಿವಿಯಲ್ಲಿ ಅಧ್ಯಯನ, ಸಂಶೋಧನ ಕೇತ್ರದ ಅಭಿವೃದ್ಧಿಯ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಮನ್ನಣೆ ದೊರೆತಿದೆ. ಕ್ರೀಡಾನೀತಿಯನ್ನು ಜಾರಿಗೊಳಿಸುವುದರ ಮೂಲಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ದೇಶದ ಪ್ರತಿಷ್ಟಿತ ವಿವಿಗಳ ಜೊತೆಗೆ ಮಂಗಳೂರು ವಿವಿಯೂ ಗುರುತಿಸುವಂತಾಗಿದೆ. ಪ್ರೊ.ಭೈರಪ್ಪ ಅವರು ಮಂಗಳೂರು ವಿವಿಯ ಅಭಿವೃದ್ಧಿಯ ಹರಿಕಾರನಾಗಿದ್ದಾರೆ ಎಂದರು.  

ಇದೇ ಸಂದರ್ಭದಲ್ಲಿ ಕುಲಪತಿ ಪ್ರೊ.ಭೈರಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಪ್ರೊ.ಕೆ.ಬೈರಪ್ಪ ಅವರು ಕಳೆದ ನಾಲ್ಕು ವರ್ಷದ ಅವಧಿಯ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್ ರೈ, ಆದಿಚುಂಚನಗಿರಿ ಮಠದ ಧರ್ಮಪಾಲನಾಥ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಅವರು ಸ್ವಾಗತಿಸಿದರು. ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಖಾನ್ ವಂದಿಸಿದರು. ಪ್ರಾದ್ಯಾಪಕರಾದ ಪ್ರೊ.ರವಿಶಂಕರ್ ರಾವ್ ಹಾಗೂ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News