ಕೊಯಮತ್ತೂರು: ನಕಲಿ ನೋಟು ಮುದ್ರಣ ಘಟಕ ಪತ್ತೆ, ಓರ್ವನ ಬಂಧನ

Update: 2018-06-02 16:24 GMT

 ಕೊಯಮತ್ತೂರು,ಜೂ.2: ಖೋಟಾನೋಟುಗಳನ್ನು ಮುದ್ರಿಸುವ ಘಟಕವೊಂದನ್ನು ಕೊಯಮತ್ತೂರಿನಲ್ಲಿ ಶನಿವಾರ ಪೊಲೀಸರು ಭೇದಿಸಿದ್ದು, ಒಟ್ಟು 1 ಕೋಟಿ ರೂ. ಮೌಲ್ಯದ 6 ಸಾವಿರ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದಾರೆ. ಕೊಯಮತ್ತೂರಿನಲ್ಲಿ ಇಂದು ಮುಂಜಾನೆ ಪೊಲೀಸರು ವಾಹನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯುವಕನೊಬ್ಬ ತನ್ನ ದ್ವಿಚಕ್ರವಾಹನದಲ್ಲಿ ಭಾರೀ ಸಂಖ್ಯೆಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಕೊಂಡೊಯ್ಯುತ್ತಿರುವುದು ಪತ್ತೆಯಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು, 83 ಲಕ್ಷ ರೂ.ಗೂ ಅಧಿಕ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯು ವಿಚಾರಣೆಯ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಕೊಯಮತ್ತೂರು ನಗರದ ಹೊರವಲಯ ವೇಲಾಂಡಿಪಾಳಯಂನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ, 20 ಲಕ್ಷ ರೂ. ಮುಖಬೆಲೆಯ ಭಾರೀ ಪ್ರಮಾಣದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರ ಜೊತೆಗೆ ಖೋಟಾನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ಕಟ್ಟಿಂಗ್ ಮೆಶಿನ್ ಅನ್ನು ಕೂಡಾ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News