ಶಿಲ್ಲಾಂಗ್ : ಕೋಮು ಹಿಂಸಾಚಾರ: ಕರ್ಫ್ಯೂ ಜಾರಿ

Update: 2018-06-02 16:45 GMT

ಶಿಲ್ಲಾಂಗ್, ಜೂ. 2: ರಾತ್ರಿಯಿಡಿ ನಡೆದ ಹಿಂಸಾಚಾರದ ಸಂದರ್ಭ ಉದ್ರಿಕ್ತ ಗುಂಪು ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಿದೆ ಹಾಗೂ ಕನಿಷ್ಠ ಐದು ವಾಹನಗಳಿಗೆ ಹಾನಿ ಎಸಗಿದೆ. ಈ ಹಿನ್ನೆಲೆಯಲ್ಲಿ ಶಿಲ್ಲಾಂಗ್‌ನಲ್ಲಿ ಶನಿವಾರ ಕೂಡ ಕರ್ಫ್ಯೂ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಬ್ಬಿಣದ ಸಲಾಕೆಯಿಂದ ಥಳಿತಕ್ಕೊಳಗಾಗಿ ಗಾಯಗೊಂಡ ಪೊಲೀಸ್ ಅಧೀಕ್ಷಕ (ನಗರ) ಸ್ಟೀಫನ್ ರಿಂಜಾಹ್ ಅವರನ್ನು ಶಿಲ್ಲಾಂಗ್‌ನ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಅಕ್ರಮವಾಗಿ ನೆಲೆನಿಂತವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ಕೇಳಿ ಬಂದಿದೆ. ನಗರದ ಹಲವು ಪ್ರದೇಶದಲ್ಲಿ ಕಲ್ಲು ತೂರಾಟದಿಂದ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಗುರುವಾರ ಅಪರಾಹ್ನ ಬಸ್ ಕ್ಲೀನರ್ ಓರ್ವನಿಗೆ ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿದ ಬಳಿಕ ಘರ್ಷಣೆ ಆರಂಭವಾಗಿದೆ. ಗಂಭೀರ ಗಾಯಗೊಂಡಿದ್ದ ಕ್ಲೀನರ್ ಮೃತಪಟ್ಟಿದ್ದಾನೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಬಳಿಕ ಬಸ್ ಚಾಲಕರು ಸೇರಿದರು. ಇಲ್ಲಿಂದ ಹಿಂಸಾಚಾರ ಆರಂಭವಾಯಿತು. ಅವರನ್ನು ಚದುರಿಸಲು ಪೊಲೀಸರು ಅಶ್ರವಾಯು ಸೆಲ್‌ಗಳನ್ನು ಸಿಡಿಸಿದರು.

ಅಂತಿಮ ಯಾತ್ರೆಯಲ್ಲಿ ಘರ್ಷಣೆ ಶ್ರೀನಗರದಲ್ಲಿ ಸಿಆರ್‌ಪಿಎಫ್ ವಾಹನ ಢಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಬಳಿಕ ಶನಿವಾರ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆ ನಡುವೆ ಘರ್ಷಣೆ ಆರಂಭವಾಗಿದೆ. ಮೃತಪಟ್ಟ ಯುವಕನ ಅಂತಿಮ ಯಾತ್ರೆಯನ್ನು ಫತೇಹ್ಕಾಡಲ್‌ನಲ್ಲಿ ತಡೆ ಹಿಡಿದಾಗ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News