ಸಿಂಗಾಪುರ: ಶಾಂಗ್ರಿ-ಲಾ ಮಾತುಕತೆಯ ನೇಪಥ್ಯದಲ್ಲಿ ಮೋದಿ-ಮ್ಯಾಟಿಸ್ ಮಾತುಕತೆ

Update: 2018-06-02 17:24 GMT

ಸಿಂಗಾಪುರ, ಜೂ. 2: ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್‌ರನ್ನು ಸಿಂಗಾಪುರದಲ್ಲಿ ಭೇಟಿಯಾಗಿ ಭದ್ರತಾ ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ತನ್ನ ಸೇನೆಗೆ ಭಾರತ ಎಷ್ಟು ಮಹತ್ವ ಎನ್ನುವುದನ್ನು ಸೂಚಿಸುವ ಸಾಂಕೇತಿಕ ಕ್ರಮವೊಂದರಲ್ಲಿ ಅಮೆರಿಕ ತನ್ನ ಸೇನಾ ಘಟಕ ‘ಪೆಸಿಫಿಕ್ ಕಮಾಂಡ್’ಗೆ ‘ಇಂಡೋ-ಪೆಸಿಫಿಕ್ ಕಮಾಂಡ್’ ಎಂಬುದಾಗಿ ಮರುನಾಮಕರಣ ಮಾಡಿದ ದಿನಗಳ ಬಳಿಕ ಈ ಮಹತ್ವದ ಭೇಟಿ ಸಂಭವಿಸಿದೆ.

 ಆಗ್ನೇಯ ಏಶ್ಯದ ಮೂರು ದೇಶಗಳ ಭೇಟಿಯ ಕೊನೆಯ ಹಂತದಲ್ಲಿ ಸಿಂಗಾಪುರದಲ್ಲಿರುವ ಪ್ರಧಾನಿ ಮೋದಿ, ಮ್ಯಾಟಿಸ್ ಜೊತೆ ರಹಸ್ಯ ಮಾತುಕತೆಗಳನ್ನು ನಡೆಸಿದರು. ಈ ಮಾತುಕತೆಯ ವೇಳೆ, ಉಭಯ ತಂಡಗಳು ಪರಸ್ಪರ ಹಾಗೂ ಜಾಗತಿಕ ಮಹತ್ವದ ಎಲ್ಲಾ ಭದ್ರತಾ ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸಿದವು ಎಂದು ಮೂಲಗಳು ಹೇಳಿವೆ.

ಸುಮಾರು ಒಂದು ಗಂಟೆ ನಡೆದ ಮಾತುಕತೆಯ ವೇಳೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತರಿದ್ದರು.

ವಾರ್ಷಿಕ ಶಾಂಗ್ರಿ-ಲಾ ಮಾತುಕತೆಯ ನೇಪಥ್ಯದಲ್ಲಿ ಈ ಸಭೆ ನಡೆಯಿತು.

‘‘ಮಾತುಕತೆಯ ಕೇಂದ್ರ ಬಿಂದು, ಪ್ರಧಾನಿ ಮೋದಿ ಶುಕ್ರವಾರ ರಾತ್ರಿ ಶಾಂಗ್ರಿ-ಲಾ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, ಈ ವಲಯವಾಗಿತ್ತು’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ವೈರತ್ವದಿಂದ ಕೂಡಿದ ಏಶ್ಯ’ ಈ ವಲಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಹಾಗೂ ‘ಸಹಕಾರದ ಏಶ್ಯ’ ಹಾಲಿ ಶತಮಾನವನ್ನು ರೂಪಿಸುತ್ತದೆ ಎಂಬುದಾಗಿ ಮೋದಿ ತನ್ನ ಭಾಷಣದಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಗಾಂಧೀಜಿ ಸ್ಮರಣಾ ಫಲಕ ಅನಾವರಣ

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಎಮರಿಟಸ್ ಹಿರಿಯ ಸಚಿವ ಗೊಹ್ ಚೊಕ್ ಟಾಂಗ್ ಶನಿವಾರ ಜಂಟಿಯಾಗಿ ಮಹಾತ್ಮಾ ಗಾಂಧೀಜಿಯವರ ಸ್ಮರಣಾ ಫಲಕವನ್ನು ಅನಾವರಣಗೊಳಿಸಿದರು.

ಸಿಂಗಾಪುರದ ಕ್ಲಿಫರ್ಡ್ ಪಯರ್‌ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮವನ್ನು ವಿಸರ್ಜನೆಗೊಳಿಸಿದ ಸ್ಥಳದಲ್ಲಿ ಫಲಕವನ್ನು ಅನಾವರಣಗೊಳಿಸಲಾಗಿದೆ.

 ಕ್ಲಿಫರ್ಡ್ ಪಯರ್‌ನಲ್ಲಿರುವ ಸಮುದ್ರದಲ್ಲಿ 1948ರಲ್ಲಿ ಗಾಂಧೀಜಿಯ ಚಿತಾಭಸ್ಮವನ್ನು ವಿಸರ್ಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ ನೆಚ್ಚಿನ ‘ವೈಷ್ಣವ್ ಜನ್ ತೋ ತೇನೆ ಕಹಿಯೇ’ ಭಜನೆ ಹಿನ್ನೆಲೆಯಲ್ಲಿ ಕೇಳುತ್ತಿತ್ತು.

1948ರಲ್ಲಿ ಗಾಂಧೀಜಿ ಹತ್ಯೆಯ ಬಳಿಕ, ಅವರ ಚಿತಾಭಸ್ಮವನ್ನು ವಿಸರ್ಜನೆಗಾಗಿ ಸಿಂಗಾಪುರ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಗೆ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News