ಎಲ್ಲ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಪಡೆಯಲು ಸಿದ್ಧ: ಮ್ಯಾನ್ಮಾರ್

Update: 2018-06-02 17:28 GMT

ಸಿಂಗಾಪುರ, ಜೂ. 2: ಮ್ಯಾನ್ಮಾರ್ ಸೈನಿಕರ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಎಲ್ಲ 7 ಲಕ್ಷ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್ ಸಿದ್ಧವಿದೆ ಎಂದು ಆ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ತೌಂಗ್ ತುನ್ ಶನಿವಾರ ಹೇಳಿದ್ದಾರೆ.

ಸಿಂಗಾಪುರದಲ್ಲಿ ನಡೆಯುತ್ತಿರುವ ವಾರ್ಷಿಕ ಶಾಂಗ್ರಿ-ಲಾ ಮಾತುಕತೆ ವೇದಿಕೆಯಲ್ಲಿ ಅವರು ಮಾತನಾಡುತ್ತಿದ್ದರು.

 ರೊಹಿಂಗ್ಯಾ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನೆಲೆಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ‘ರಕ್ಷಣೆಯ ಜವಾಬ್ದಾರಿ’ ವಿಧಿಯನ್ನು ಜಾರಿಗೊಳಿಸಬಹುದೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

2005ರ ವಿಶ್ವಸಂಸ್ಥೆಯ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಈ ‘ರಕ್ಷಣೆಯ ಜವಾಬ್ದಾರಿ’ ವಿಧಿಯನ್ನು ಅಂಗೀಕರಿಸಲಾಗಿತ್ತು. ಈ ಮೂಲಕ ದೇಶಗಳು ತಮ್ಮ ಪ್ರಜೆಗಳನ್ನು ಜನಾಂಗೀಯ ಹತ್ಯೆ, ಯುದ್ಧಾಪರಾಧಗಳು, ಜನಾಂಗೀಯ ನಿರ್ಮೂಲನ ಮತ್ತು ಮಾನವತೆಯ ವಿರುದ್ಧದ ಅಪರಾಧಗಳಿಂದ ರಕ್ಷಿಸಲು ಒಪ್ಪಿಕೊಂಡಿವೆ.

‘‘7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಸ್ವಯಂಪ್ರೇರಣೆಯಿಂದ ಬರಲು ಸಿದ್ಧರಿದ್ದರೆ, ಅವರನ್ನು ಸ್ವೀಕರಿಸಲು ನಾವು ತಯಾರಿದ್ದೇವೆ’’ ಎಂದು ತೌಂಗ್ ತುನ್ ನುಡಿದರು.

‘‘ಇದನ್ನು ಜನಾಂಗೀಯ ನಿರ್ಮೂಲನೆ ಎಂದು ಕರೆಯಬಹುದೇ? ಅಲ್ಲಿ ಯಾವುದೇ ಯುದ್ಧ ನಡೆಯುತ್ತಿಲ್ಲ. ಹಾಗಾಗಿ, ಅದು ಯುದ್ಧಾಪರಾಧವಲ್ಲ. ಮಾನವತೆಯ ವಿರುದ್ಧದ ಅಪರಾಧ? ಅದನ್ನು ಪರಿಶೀಲಿಸಬಹುದಾಗಿದೆ. ಆದರೆ, ಅದಕ್ಕೆ ನಮಗೆ ಸ್ಪಷ್ಟ ಪುರಾವೆಗಳು ಬೇಕು. ಈ ಗಂಭೀರ ಆರೋಪಗಳು ಸಾಬೀತಾಗಬೇಕು. ಅವುಗಳನ್ನು ಹಗುರವಾಗಿ ಹೇಳಿಕೊಳ್ಳಬಾರದು’’ ಎಂದರು.

2007ರ ಆಗಸ್ಟ್‌ನಲ್ಲಿ ರಖೈನ್ ರಾಜ್ಯದಲ್ಲಿ ಗಲಭೆ ಪುನರಾರಂಭಗೊಂಡ ಬಳಿಕ, ಮ್ಯಾನ್ಮಾರ್ ಸೇನೆಯ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ಅಲ್ಲಿಂದ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ. ಅವರೀಗ ಬಾಂಗ್ಲಾದೇಶದ ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News