ಮಂಗಳೂರು: ವಿಕಾಸ್ ಕಾಲೇಜಿನಲ್ಲಿ ಪುನರ್ಮನನ ಶಿಬಿರ
ಮಂಗಳೂರು, ಜೂ. 3: ನಗರದ ವಿಕಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನರ್ಮನನ ಶಿಬಿರವನ್ನು ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸಭಾಂಗಣದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಂಡ್ಯರಾಜ್ ಬಲ್ಲಾಳ್ ಎಜ್ಯುಕೇಶನ್ ಇನ್ಸ್ಟಿಟ್ಯೂಶನ್ ಇದರ ಎಂ.ಡಿ. ಆ್ಯಂಡ್ ಟ್ರಸ್ಟಿ ಹಾಗೂ ಮಂಗಳೂರು ಕೆಎಂಸಿ ಒಬ್ಸ್‌ಟರ್‌ಟ್ರಿಕ್ಸ್ ಮತ್ತು ಗೈನ್ಯೊಕೋಲೊಜಿ ಡಾ. ಪ್ರಿಯ ಬಲ್ಲಾಳ್ ಕೆ ಆಗಮಿಸಿ ಭವಿಷ್ಯದಲ್ಲಿ ಏನಾಗಬೇಕೋ ಅದರ ನಿರ್ಧಾರ ಪಿಯುಸಿ ಹಂತದಲ್ಲಿಯೇ ಮಾಡಿ, ಮುಂದಿನ ಜೀವನ ಸಮತೋಲನಗೊಳಿಸಿಕೊಳ್ಳಲು ಈ ನಿರ್ಧಾರ ಸಹಾಯಕ. ಕಠಿಣ ಪರಿಶ್ರಮವಿರಲಿ, ಯೋಗದಿಂದ ದಿನವನ್ನು ಪ್ರಾರಂಭಿಸಿ, ದಿನನಿತ್ಯ ಜೀವನದಲ್ಲಿ ಹಿರಿಯರನ್ನು, ಸ್ತ್ರೀಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ. ವೈಸ್ ಚಾನ್ಸಲರ್ ಆಗಿರುವ ಡಾ. ಎಂಎಸ್ ಮೂಡಿತ್ತಾಯ ಪ್ರತಿ ಮಗು ಜನಿಸುವುದು ತಿನ್ನುವುದಕ್ಕಾಗಿ ಅಲ್ಲ, ಪರಿಶ್ರಮ ಪಡುವುದಕ್ಕಾಗಿ. ಬೌದ್ಧಿಕ ಜ್ಞಾನವನ್ನು ಪಡೆಯುವುದರ ಜೊತೆಗೆ ಭಾವನಾತ್ಮಕ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯ ಎಂದರು. ನೀವು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವಾಗ ಯಾರಾದರು ನಿಮ್ಮನ್ನು ಋಣಾತ್ಮಕವಾಗಿ ಪರಿಗಣಿಸಿದರೆ ನೀವು ಸಾಧನೆ ಮಾಡುವುದರ ಮೂಲಕ ಉತ್ತರ ಕೊಡಿ. ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಆದರೆ ಅದರ ಗುಲಾಮರಾಗಬೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷ ಸ್ಥಾನವನ್ನು ಮಾಜಿ ಸಚಿವ, ಕಾಲೇಜಿನ ಸ್ಥಾಪಕ ಅಧ್ಯಕ್ಷರೂ ಆಗಿರುವ ಜೆ. ಕೃಷ್ಣ ಪಾಲೆಮಾರ್ ವಹಿಸಿದ್ದರು. ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯಕ್ತಿಕ ಕಾಳಜಿ ವಹಿಸಿ, ಪಾಲನೆ ಮಾಡುತ್ತೇವೆ. ಹದಿಹರೆಯದಲ್ಲಾಗುವ ತಪ್ಪಿಗೆ ಇಡೀ ಜೀವನ ಹಾಳಾಗಬಾರದು. ಆ ಕಾರಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದೇವೆ. ಕಾಲೇಜಿನ ಆವರಣದಲ್ಲಿ ಬೆಳೆದ ಸಾವಯವ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಉತ್ತಮ ವಾತಾವರಣ, ಉತ್ತಮ ಜ್ಞಾನ, ಇವೆಲ್ಲವನ್ನು ನೀಡಿ ವಿದ್ಯಾರ್ಥಿಗಳು ಕಲಿತು ಹೊರಗೆ ಹೋಗುವಾಗ ಒಬ್ಬಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದು ಎಂದರು.
ಪ್ರಾಂಶುಪಾಲರಾದ ಪ್ರೊ. ರಾಜಾರಾಮ್ ರಾವ್ ಟಿ ಕಾಲೇಜಿನ ರೂಪುರೇಷೆಯ ಬಗ್ಗೆ ತಿಳಿಸಿ, ಕಾಲೇಜಿನ ಶಿಸ್ತು ಮತ್ತು ಓದುವ ಅಭ್ಯಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಸಲಹೆಗಾರರಾದ ಡಾ. ಅನಂತ್ ಪ್ರಭು ಜಿ. ವಿಕಾಸ್ ಕಾಲೇಜಿನ ಗುರಿಯನ್ನು ತಿಳಿಸುವುದರೊಂದಿಗೆ ಧನಾತ್ಮಕ 0ೋಚನೆಯಿರಬೇಕು. ಸತತ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಸಂಚಾಲಕರಾದ ಡಾ. ಡಿ ಶ್ರೀಪತಿ ರಾವ್ ಸ್ವಾಗತಿಸಿದರು. ವೇದಿಕೆಯಲ್ಲಿ ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥ ಸಾರಥಿ ಪಾಲೆಮಾರ್ ಉಪಸ್ಥಿತರಿದ್ದರು. ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕುಮಾರ್ ಕಲ್ಯ ಉಪಸ್ಥಿತರಿದ್ದರು. ಯೋಗರತ್ನ, ಗೋಪಾಲಕೃಷ್ಣ ದೇಲಂಪಾಡಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕಿ ವೈಶಾಲಿ ವಂದಿಸಿದರು. ಕಾಮರ್ಸ್ ಇನ್‌ಚಾರ್ಜ್ ಐಶ್ವರ್ಯ ರಾವ್ ಕೆ ಎಲ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ 2018 ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿಜ್ಞಾನ ವಿಭಾಗದ ಅರ್ಜುನ್ ಎ ಎಸ್ (600/585), ಅಪೇಕ್ಷಾ ಬಿ ಮಲಿಪಾಟೀಲ್ (600/583), ರಚನಾ ಪಿ (600/583), ವಾಣಿಜ್ಯ ವಿಭಾಗದಲ್ಲಿ ಸಂಗೀತ್ ಶರತ್ (600/584), ಪ್ರಜ್ಞಾ ಸಿ ಕೆ (600/582), ಹಾಗೂ ವಿಕಾಸ್ ಕಾಲೇಜಿಗೆ ನೊಂದಾವಣೆಗೊಂಡ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿನಿ ಭಾಗ್ಯಶ್ರೀ (625/621) ಅವರನ್ನು ಸನ್ಮಾನಿಸಲಾಯಿತು.