ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪುತ್ತೂರಿನ ಮುಹಮ್ಮದ್ ನವಾಝ್
ಪುತ್ತೂರು, ಜೂ. 3: ಇಲ್ಲಿನ ಕೂರ್ನಡ್ಕ ನಿವಾಸಿ ದಿ. ಉಸ್ಮಾನ್ ಹಾಜಿ ಅವರ ಪುತ್ರ ರಾಜ್ಯ ಸರ್ಕಾರಿ ಅಭಿಯೋಜಕರಾಗಿದ್ದ ಮುಹಮ್ಮದ್ ನವಾಝ್ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನೂತನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರು ಜೂ. 2ರಂದು ಬೆಂಗಳೂರಿನಲ್ಲಿ ರಾಜ್ಯಪಾಲದಿಂದ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ ಮುಹಮ್ಮದ್ ನವಾಝ್ ಅವರು ಕಳೆದ 27 ವರ್ಷಗಳಿಂದ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಹೈಕೋರ್ಟ್ ಪ್ರಾಶಿಕ್ಯೂಶನ್ ವಿಭಾಗದಲ್ಲಿ 10 ವರ್ಷಗಳ ಕಾಲ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದ ಅವರು 2015ರ ಜೂ. 23ರಂದು ರಾಜ್ಯ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಕರ್ತವ್ಯ ಮುಂದುವರಿಸಿದ್ದರು.
ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸೈಂಟ್ ಫ್ರಾನ್ಸಿಸ್ ಝೇವಿಯರ್ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣ ಹಾಗೂ 1985ರಲ್ಲಿ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಸಿದ್ದರು. ಕಾಲೇಜ್ ಅವಧಿಯಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಫಿಲೋಮಿನಾ ಕಾಲೇಜಿನ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದರು. ಬಳಿಕ ಬೆಂಗಳೂರಿನ ಎಸ್.ಜೆ.ಆರ್.ಸಿ. ಕಾನೂನು ಕಾಲೇಜ್‌ನಲ್ಲಿ 1990ರಲ್ಲಿ ಕಾನೂನು ಪದವಿ ಪೂರೈಸಿದರು. ಬಳಿಕ ತನ್ನ ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದರು. ಸರ್ಕಾರಿ ವಕೀಲರಾಗಿ, ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ, ಕರ್ನಾಟಕ ಲೋಕಾಯುಕ್ತರ ವಿಶೇಷ ಅಭಿಯೋಜಕರಾಗಿ ಸೇವೆ ಸಲ್ಲಿಸಿದ್ದ ಅವರು 2015ರಿಂದ 2018ರ ತನಕ ರಾಜ್ಯ ಸರ್ಕಾರದ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜೂ. 2ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.
ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ದಿ. ಪಿ.ಉಸ್ಮಾನ್ ಹಾಜಿ ಹಾಗೂ ರುಖಿಯಾ ದಂಪತಿಯ ಪುತ್ರನಾದ ಅವರಿಗೆ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರಿದ್ದಾರೆ, ಮುಹಮ್ಮದ್ ನವಾಝ್ ಇದೀಗ ಬೆಂಗಳೂರಿನಲ್ಲಿ ಪತ್ನಿ ಆಯಿಷತ್ ಸುರಿಯ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಪುತ್ರಿ ನುಝಾ ರುಖಿಯಾ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿಯರ್ ಆಗಿದ್ದು, ಪುತ್ರ ನುಮೇಝ್ ಫಾರೂಕ್ ಬೆಂಗಳೂರಿನ ಖಾಸಗಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರ ತಂದೆಯೂ ಓರ್ವ ಸಮಾಜಸೇವಕರಾಗಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಬಡವರ ಹಾಗೂ ಅಶಕ್ತರ ಆಶ್ರಯದಾತರಾಗಿದ್ದ ಉಸ್ಮಾನ್ ಹಾಜಿ ಅವರು ಜನಾನುರಾಗಿಯಾಗಿದ್ದರು.
ಮುಹಮ್ಮದ್ ನವಾಝ್ ಅವರ ಪತ್ನಿ ಅಯಿಷತ್ ಸುರಿಯ ಅವರ ತಂದೆ ಎ.ಎಂ.ಫಾರೂಕ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದಾರೆ. ಹಲವಾರು ವರ್ಷಗಳ ಕಾಲ ವಕೀಲರಾಗಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದ ಎ.ಎಂ. ಫಾರೂಕ್ ಅವರು 2005ರಲ್ಲಿ ನಿವೃತ್ತರಾಗಿದ್ದಾರೆ.