ಮಲ್ಪೆ ಬೀಚ್‌ನಲ್ಲಿ ಜನಜಾಗೃತಿ ಮೂಡಿಸುವ ‘ಸಾಗರ ತ್ಯಾಜ್ಯಕ್ಕೆ ನಾಶವಾಗುವ ಮೀನಿನ ಕಲಾಕೃತಿ’
ಉಡುಪಿ, ಜೂ.3: ಪ್ರತಿದಿನ ಟನ್‌ಗಟ್ಟಲೆ ಸಾಗರ ಒಡಲು ಸೇರುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸೇವಿಸಿದ ಪರಿಣಾಮ ಸಮುದ್ರದಲ್ಲಿರುವ ಮೀನು ಹಾಗೂ ಇತರ ಜಲಚರಗಳು ಇಂದು ಅಳಿವಿನಂಚಿಗೆ ತಲುಪಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೀನಿನ ವಿಶಿಷ್ಟ ಕಲಾಕೃತಿಯೊಂದನ್ನು ಮಲ್ಪೆ ಬೀಚ್‌ನಲ್ಲಿ ಶಾಶ್ವತವಾಗಿ ಸ್ಥಾಪಿಸಲಾಗಿದೆ.
ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ‘ಐ ಆ್ಯಮ್ ಸೇವಿಂಗ್ ಮೈ ಬೀಚ್’ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಅಭಿಯಾನದ ಪ್ರಯುಕ್ತ ಉಡುಪಿಯ ಮಂತ್ರ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಸುಮಾರು 45 ಸಾವಿರ ರೂ. ವೆಚ್ಚದಲ್ಲಿ ಈ ಕಲಾಕೃತಿಯನ್ನು ರಚಿಸುತ್ತಿದೆ.
ಕಲಾವಿದ ಜನಾರ್ದನ ಹಾವಂಜೆ ಪರಿಕಲ್ಪನೆಯಲ್ಲಿ ಇನ್‌ಸ್ಟಲೇಶನ್ ಆರ್ಟ್ (ಪ್ರತಿಷ್ಠಾಪನಾ ಕಲೆ) ಮೂಲಕ ಈ ಕಲಾಕೃತಿಯನ್ನು ತಯಾರಿಸಲಾಗಿದೆ. 10 ಅಡಿ ಎತ್ತರ ಹಾಗೂ 18 ಅಡಿ ಉದ್ದದ ಈ ಕಲಾಕೃತಿಯನ್ನು ಕಬ್ಬಿಣದ ರಾಡ್ ಹಾಗೂ ಸಾಗರದಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳನ್ನು ಬಳಸಿ ಜನರನ್ನು ಆರ್ಷಿಸುವ ಮಾದರಿಯಲ್ಲಿ ರಚಿಸಲಾಗಿದೆ.
ಕಬ್ಬಿಣದ ರಾಡ್‌ನ್ನು ವೆಲ್ಡಿಂಗ್ ಮಾಡಿಸಿ ಮೀನಿನ ಆಕೃತಿಯನ್ನಾಗಿ ಮಾಡ ಲಾಗಿದ್ದು, ಅದರ ಮೇಲೆ ಮೀನಿನ ಬಲೆಯನ್ನು ಹೊದಿಸಲಾಗಿದೆ. ಅದರೊಳಗೆ ಸಮುದ್ರದಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳು, ಪ್ಲಾಸ್ಟಿಕ್‌ಗಳನ್ನು ತುಂಬಿಸಿ ಡಲಾಗಿದೆ. ಈ ಮೂಲಕ ಈ ಕಲಾಕೃತಿಯು ಸಮುದ್ರದಲ್ಲಿರುವ ಮೀನುಗಳು ಪ್ಲಾಸ್ಟಿಕ್‌ಗಳನ್ನು ಸೇವಿಸಿ ನಾಶವಾಗುತ್ತಿದೆ ಎಂಬ ಸಂದೇಶವನ್ನು ಸಾರುತ್ತಿದೆ. ಈ ಕಲಾಕೃತಿಯು ನಾಳೆ ಬೆಳಗ್ಗೆ 8.30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
‘ಪ್ರವಾಸಿಗರಿಂದ ಶೇ.10ರಷ್ಟು ಬೀಚ್ ಮಲೀನವಾದರೆ ಶೇ.90ರಷ್ಟು ಸ್ಥಳೀಯಾಡಳಿತ ಸಂಸ್ಥೆಗಳ ತ್ಯಾಜ್ಯ ಹಾಗೂ ನದಿ ತೀರದ ಜನರಿಂದಾಗಿ ಬೀಚ್ ಗಳು ಹಾಳಾಗುತ್ತಿವೆ. ಇದು ಬೀಚ್‌ಗಳು ಇಂದು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸಮುದ್ರದಲ್ಲಿ ಟಯರ್, ಪ್ಲಾಸ್ಟಿಕ್ ಬಾಟಲ್, ಮದ್ಯದ ಬಾಟಲ್, ಮೀನಿನ ಬಲೆ, ಹಗ್ಗ, ಮಕ್ಕಳ ಆಟಿಕೆ ವಸ್ತುಗಳು ಸೇರು ತ್ತಿವೆ. ಇದು ಸಮುದ್ರದಲ್ಲಿರುವ ಚಲಚರಗಳಿಗೆ ಮಾರಕವಾಗಿದೆ’ ಎಂದು ಮಲ್ಪೆ ಬೀಚ್ ನಿರ್ವಹಾ ಅಧಿಕಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಪ್ರತಿದಿನ 1 ಟನ್ ತ್ಯಾಜ್ಯ
ಮಲ್ಪೆ ಬೀಚ್‌ನಲ್ಲಿ ಮಳೆಗಾಲದ ಮೂರು ತಿಂಗಳು ಪ್ರತಿದಿನ ಒಂದು ಟನ್ ತ್ಯಾಜ್ಯಗಳು ಸಂಗ್ರಹವಾಗುತ್ತದೆ. ಪಡುಕೆರೆ ನದಿಯ ಮೂಲಕ ಹಾಗೂ ಇತರ ಕಡೆಗಳಿಂದ ಸಮುದ್ರದ ಸೇರುವ ತ್ಯಾಜ್ಯಗಳು ಬೀಚ್‌ನಲ್ಲಿ ಶೇಖರಣೆಯಾಗು ತ್ತಿದೆ.
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಪ್ರತಿದಿನ 1 ಟನ್ ತ್ಯಾಜ್ಯಗಳು ಸಂಗ್ರಹ ವಾಗುತ್ತಿದ್ದು, ಉಳಿದ ಸಮಯದಲ್ಲಿ 300 ಕೆ.ಜಿ.ಯಷ್ಟು ತ್ಯಾಜ್ಯಗಳು ಸಂಗ್ರಹ ವಾಗುತ್ತವೆ. ಇವುಗಳನ್ನು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಟಿಪ್ಪರ್ ಮೂಲಕ ಸಾಗಿಸಿ ವಿಲೇವಾರಿ ಮಾಡಲಾಗುತ್ತದೆ. ಇನ್ನು ಈ ಕಲಾಕೃತಿಯಲ್ಲಿ ಪ್ರತಿದಿನ ಸ್ವಲ್ಪ ಪ್ರಮಾಣದ ತ್ಯಾಜ್ಯವನ್ನು ಜನ ಜಾಗೃತಿಗಾಗಿ ಸಂಗ್ರಹಿಸಿ ಇಡಲಾಗುತ್ತದೆ ಎಂದು ಬೀಚ್ ನಿರ್ವಹಣಾಧಿಕಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರವಾಸಿಗರು ಹಾಗೂ ಸ್ಥಳೀಯರು ಬೀಚ್‌ಗಳಲ್ಲಿ ಎಸೆಯುವ ಪಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳು ಸಮುದ್ರ ಸೇರಿ ಅಲ್ಲಿರುವ ಮೀನು, ಆಮೆ ಹಾಗೂ ಇತರ ಜಲಚರಗಳ ಒಡಲನ್ನು ಸೇರುತ್ತಿವೆ. ಇದರಿಂದ ಅವುಗಳ ಸಂತತಿ ನಾಶ ವಾಗುತ್ತಿರುವುದು ಕಂಡು ಬರುತ್ತಿದೆ.
-ಡಾ.ಲಕ್ಷ್ಮೀಪತಿ, ಅಸೋಸಿಯೇಟ್ ಪ್ರೊಫೆಸರ್, ಮೀನುಗಾರಿಕಾ ಮಹಾ ವಿದ್ಯಾಲಯ, ಮಂಗಳೂರು.ಸಮುದ್ರಕ್ಕೆ ಎಸೆಯುವ ಅನುಪಯುಕ್ತ ವಸ್ತುಗಳಾದ ಬಾಟಲಿ, ಮೀನಿನ ಬಲೆ ಸೇರಿದಂತೆ ವಿವಿಧ ವಸ್ತುಗಳಿಂದ ಪ್ರತಿಷ್ಠಾಪನಾ ಕಲೆಯ ಮೂಲಕ ಈ ಕಲಾಕೃತಿ ಯನ್ನು ರಚಿಸಲಾಗಿದೆ. ಹಾವಂಜೆಯಲ್ಲಿ ತಯಾರಿಸಿ ತಂದಿರುವ ಈ ಕಲಾಕೃತಿ ಯನ್ನು ಬೀಚ್‌ನಲ್ಲಿ ಸ್ಥಾಪಿಸಲಾಗುತ್ತದೆ. ತ್ಯಾಜ್ಯಗಳು ಮೀನುಗಳ ಹೊಟ್ಟೆಯೊಳಗೆ ಸೇರಿ ಅವು ಸಾವನ್ನಪ್ಪುತ್ತಿರುವುದರಿಂದ ಪರಿಸರದಲ್ಲಿ ಅಸಮಾತೋಲನಗಳು ಆಗುತ್ತಿದೆ. ಜನರು ಬೀಚ್‌ಗಳಲ್ಲಿ ಕಸ ಎಸೆಯದಂತೆ ಜಾಗೃತಿಯ ಮೂಡಿಸುವ ಕಲಾಕೃತಿ ಇದಾಗಿದೆ
-ಜನಾರ್ದನ ಹಾವಂಜೆ, ಕಲಾವಿದ