ಗಾಝಾ: ರಝಾನ್ ನಜ್ಜರ್ ಹತ್ಯೆ ವಿರೋಧಿಸಿ ಫೆಲೆಸ್ತೀನೀಯರಿಂದ ಪ್ರತಿಭಟನೆ

Update: 2018-06-03 17:41 GMT

ಖುಝಾ (ಗಾಝಾ ಪಟ್ಟಿ), ಜೂ. 3: ಇಸ್ರೇಲ್-ಗಾಝಾ ಗಡಿಯಲ್ಲಿ ಶುಕ್ರವಾರ ಇಸ್ರೇಲ್ ಸೈನಿಕರ ಗುಂಡಿಗೆ ಬಲಿಯಾದ ನರ್ಸ್ ರಝಾನ್ ನಜ್ಜರ್ ಶನಿವಾರ ಸಾವಿರಾರು ಫೆಲೆಸ್ತೀನೀಯರು ಭಾಗವಹಿಸಿದರು. ಬಿಳಿ ಸಮವಸ್ತ್ರ ಧರಿಸಿದ ನೂರಾರು ವೈದ್ಯಕೀಯ ಸ್ವಯಂಸೇವಕರೂ ಮೆರವಣಿಗೆಯಲ್ಲಿ ಜೊತೆಯಾದರು.

ಶುಕ್ರವಾರ ಇಸ್ರೇಲ್-ಗಾಝಾ ಗಡಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರ ಗುಂಡಿನಿಂದ ಗಾಯಗೊಂಡ ಪ್ರತಿಭಟನಕಾರರೊಬ್ಬರನ್ನು ಸ್ಥಳದಿಂದ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದ 21 ವರ್ಷದ ರಝಾನ್ ನಜ್ಜರ್ ಮೇಲೆ ಇಸ್ರೇಲ್ ಸೈನಿಕರು ಗುಂಡು ಹಾರಿಸಿದ್ದರು. ಗುಂಡೇಟಿನಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟರು.

ಮಾರ್ಚ್ ಕೊನೆಯ ಭಾಗದಿಂದ ಈವರೆಗೆ ನಡೆದ ಪ್ರತಿಭಟನೆಗಳ ವೇಳೆ ಇಸ್ರೇಲಿ ಸೈನಿಕರ ಗುಂಡೇಟಿನಿಂದ 115ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಆ ಪೈಕಿ ರಝಾನ್ ಸೇರಿದಂತೆ ಇಬ್ಬರು ಮಹಿಳೆಯರಾಗಿದ್ದಾರೆ.

ರಝಾನ್ ಹತ್ಯೆಯನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ಖಂಡಿಸಿದ್ದಾರೆ. ಆರೋಗ್ಯ ಕಾರ್ಯಕರ್ತೆ ಎಂಬುದಾಗಿ ಸ್ಪಷ್ಟವಾಗಿ ಗುರುತಿಸಬಲ್ಲ ಬಟ್ಟೆಯನ್ನು ಆಕೆ ಧರಿಸಿದ್ದರೂ, ಇಸ್ರೇಲ್ ಸೈನಿಕರು ಆಕೆಯ ಮೇಲೆ ಗುಂಡು ಹಾರಿಸಿದ್ದು ಖಂಡನೀಯ ಎಂದು ಅವರು ಹೇಳಿದ್ದಾರೆ.

‘‘ಪ್ರತಿಭಟನೆಯ ವೇಳೆ, ವೈದ್ಯಕೀಯ ಸಿಬ್ಬಂದಿ ಎಂಬುದಾಗಿ ಸ್ಪಷ್ಟವಾಗಿ ಗುರುತಿಸಬಹುದಾದ ಮಹಿಳೆಯನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿರುವುದು ಖಂಡನಾರ್ಹ’’ ಎಂದು ಸ್ಥಳೀಯ ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಜೇಮೀ ಮೆಕ್‌ಗೋಲ್ಡ್‌ರಿಕ್ ಹೇಳಿದ್ದಾರೆ.

 ರಝನ್‌ರ ಅಂತ್ಯಸಂಸ್ಕಾರದ ಬಳಿಕ, ಫೆಲೆಸ್ತೀನಿಯರು ಗಡಿಬೇಲಿಯ ಸಮೀಪ ಧಾವಿಸಿ, ನರ್ಸ್ ಮೇಲೆ ಗುಂಡು ಹಾರಿಸಿದ ಇಸ್ರೇಲ್ ಸೈನಿಕರ ಕೃತ್ಯವನ್ನು ವಿರೋಧಿಸಿ ಪ್ರತಿಭಟಿಸಿದರು.

ಫೆಲೆಸ್ತೀನಿಯರ ರಕ್ಷಣೆಗೆ ಕರೆ ನೀಡುವ ಮಸೂದೆಗೆ ಅಮೆರಿಕ ವೀಟೊ

ಫೆಲೆಸ್ತೀನೀಯರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡುವ ಅರಬ್ ಬೆಂಬಲಿತ ಕರಡು ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಶುಕ್ರವಾರ ವೀಟೊ (ತಡೆ) ಚಲಾಯಿಸಿದೆ. ಅದೇ ವೇಳೆ, ಗಾಝಾದಲ್ಲಿ ನಡೆಯುತ್ತಿರುವ ಹಿಂಸೆಗಾಗಿ ಹಮಾಸನ್ನು ಖಂಡಿಸುವ ತನ್ನ ನಿರ್ಣಯಕ್ಕೆ ಬೆಂಬಲ ಪಡೆಯುವಲ್ಲಿ ಅಮೆರಿಕ ವಿಫಲವಾಗಿದೆ.

ಗಾಝಾ ಗಡಿ ಬೇಲಿ ಸಮೀಪ ಇಸ್ರೇಲ್ ಸೈನಿಕರ ಗುಂಡಿಗೆ 21 ವರ್ಷದ ಫೆಲೆಸ್ತೀನ್ ನರ್ಸ್ ಬಲಿಯಾದ ದಿನದಂದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಬೆಳವಣಿಗೆ ನಡೆದಿದೆ.

ಅರಬ್ ದೇಶಗಳ ಪರವಾಗಿ ಕುವೈತ್ ಫೆಲೆಸ್ತೀನ್ ಪರ ನಿರ್ಣಯವನ್ನು ಮಂಡಿಸಿತು ಹಾಗೂ ಚೀನಾ, ಫ್ರಾನ್ಸ್ ಮತ್ತು ರಶ್ಯ ಸೇರಿದಂತೆ 10 ದೇಶಗಳು ಇದಕ್ಕೆ ಬೆಂಬಲ ನೀಡಿದವು. ಬ್ರಿಟನ್, ಇಥಿಯೋಪಿಯ, ನೆದರ್‌ಲ್ಯಾಂಡ್ಸ್ ಮತ್ತು ಪೋಲ್ಯಾಂಡ್- ಈ ನಾಲ್ಕು ದೇಶಗಳು ಮತದಾನದಿಂದ ದೂರ ಉಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News