ಫ್ರೆಂಚ್ ಓಪನ್: ಹಾಲೆಪ್, ನಡಾಲ್ ಕ್ವಾರ್ಟರ್‌ ಫೈನಲ್‌ಗೆ

Update: 2018-06-04 18:30 GMT

ಪ್ಯಾರಿಸ್, ಜೂ.4: ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಹಾಗೂ ರಶ್ಯದ ಡರಿಯಾ ಕಸಟ್‌ಕಿನಾ ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ರೋಮಾನಿಯದ ಹಾಲೆಪ್ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್‌ರನ್ನು 6-2, 6-1 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

 2014 ಹಾಗೂ 2017ರ ಫ್ರೆಂಚ್ ಓಪನ್‌ನಲ್ಲಿ ಎರಡು ಬಾರಿ ರನ್ನರ್ಸ್-ಅಪ್ ಆಗಿದ್ದ ಹಾಲೆಪ್ ನಿಧಾನ ಆರಂಭ ಪಡೆದಿದ್ದರು. ಒಮ್ಮೆ ಲಯ ಕಂಡುಕೊಂಡ ಬಳಿಕ 16ನೇ ಶ್ರೇಯಾಂಕದ ಮಾರ್ಟೆನ್ಸ್ ಮೇಲೆ ಸವಾರಿ ಮಾಡಿ ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡರು.

ಮೂರನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಹಾಲೆಪ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅಥವಾ ಸ್ಥಳೀಯ ಆಟಗಾರ್ತಿ ಕರೊಲಿನ್ ಗಾರ್ಸಿಯಾರನ್ನು ಎದುರಿಸಲಿದ್ದಾರೆ.

ವೋಝ್ನಿಯಾಕಿಗೆ ಕಸಟ್‌ಕಿನಾ ಶಾಕ್

ರಶ್ಯದ ಆಟಗಾರ್ತಿ ಡರಿಯಾ ಕಸಟ್‌ಕಿನಾ ವಿಶ್ವದ ನಂ.4ನೇ ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಅವರನ್ನು 7-6(5), 6-3 ಸೆಟ್‌ಗಳಿಂದ ಮಣಿಸಿ ಶಾಕ್ ನೀಡಿದ್ದಾರೆ.

 ಸೋಮವಾರ ನಡೆದ ಫ್ರೆಂಚ್ ಓಪನ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡರಿಯಾ ಈ ಸಾಧನೆ ಮಾಡಿದ್ದಾರೆ. 14ನೇ ಶ್ರೇಯಾಂಕದ ಕಸಟ್‌ಕಿನಾ ರವಿವಾರ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡ ಸಂದರ್ಭದಲ್ಲಿ 7-6, 3-3 ಮುನ್ನಡೆಯಲ್ಲಿದ್ದರು. ಸೋಮವಾರ ಪಂದ್ಯ ಮುಂದುವರಿದಾಗ ಉತ್ತಮ ಪ್ರದರ್ಶನ ಮುಂದುವರಿಸಿದ 21ರ ಹರೆಯದ ಕಸಟ್‌ಕಿನಾ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಝ್ನಿಯಾಕಿ ವಿರುದ್ಧ ಮೇಲುಗೈ ಸಾಧಿಸಿದರು. ಕಸಟ್‌ಕಿನಾ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮುಂದಿನ ಸುತ್ತಿನಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೋಯೆನ್ ಸ್ಟೀಫನ್ಸ್‌ರನ್ನು ಎದುರಿಸಲಿದ್ದಾರೆ.

ನಡಾಲ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಜರ್ಮನಿಯ ಮ್ಯಾಕ್ಸಿಮಿಲಿಯನ್ ಮಾರ್ಟರರ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ದಾಖಲೆ 11ನೇ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ ವಿಶ್ವದ ನಂ.70ನೇ ಆಟಗಾರ ಮಾರ್ಟರರ್ ವಿರುದ್ಧ 6-3, 6-2, 7-6(7/4) ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಈ ಮೂಲಕ 12ನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಅಂತಿಮ-8ರ ಘಟ್ಟ ತಲುಪಿದ್ದು, ನೊವಾಕ್ ಜೊಕೊವಿಕ್ ದಾಖಲೆ ಸರಿಗಟ್ಟಿದರು. ಜೊಕೊವಿಕ್ ರವಿವಾರ ಈ ದಾಖಲೆ ಮಾಡಿದ್ದರು.

ನಡಾಲ್ ಇದೀಗ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಸತತ 37ನೇ ಸೆಟ್‌ನ್ನು ಜಯಿಸಿದ್ದು, 1979-81ರಲ್ಲಿ ಜೊರ್ನ್ ಬೊರ್ಗ್ ದಾಖಲೆಯನ್ನು ಸರಿಗಟ್ಟಲು ಕೇವಲ ನಾಲ್ಕು ಸೆಟ್‌ನಿಂದ ಹಿಂದಿದ್ದಾರೆ.

ನಡಾಲ್ ಅರ್ಜೆಂಟೀನದ ಡಿಯಾಗೊ ಸ್ಚೆವರ್ಟ್‌ಮನ್‌ರನ್ನು ಎದುರಿಸಲಿದ್ದಾರೆ. ಡಿಯಾಗೊ ದ.ಆಫ್ರಿಕದ ಕೇವಿನ್ ಆ್ಯಂಡರ್ಸನ್‌ರನ್ನು 1-6, 2-6, 7-5, 7-6(7/0), 6-2 ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News