ಸೌದಿ: ಮಹಿಳೆಯರಿಗೆ ಚಾಲನಾ ಪರವಾನಿಗೆ ವಿತರಣೆ ಆರಂಭ

Update: 2018-06-05 17:06 GMT

ರಿಯಾದ್ (ಸೌದಿ ಅರೇಬಿಯ), ಜೂ. 5: ಸೌದಿ ಅರೇಬಿಯ ಸೋಮವಾರ ಮಹಿಳೆಯರಿಗೆ ಚಾಲನಾ ಪರವಾನಿಗೆಗಳನ್ನು ನೀಡಲು ಆರಂಭಿಸಿದೆ ಎಂದು ಸರಕಾರಿ ಒಡೆತನದ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

‘‘ಮಹಿಳೆಯರ ಮೊದಲ ತಂಡವು ಇಂದು ಸೌದಿ ವಾಹನ ಚಾಲನಾ ಪರವಾನಿಗೆಗಳನ್ನು ಸ್ವೀಕರಿಸಿತು’’ ಎಂದು ಅದು ಹೇಳಿದೆ.

‘‘ಸೌದಿ ಅರೇಬಿಯದಲ್ಲಿ ಮಾನ್ಯತೆ ಹೊಂದಿರುವ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಿಗೆಗಳ ಬದಲಿಗೆ ಸೌದಿ ಪರವಾನಿಗೆಗಳನ್ನು ನೀಡುವ ಪ್ರಕ್ರಿಯೆಯನ್ನು ಸಂಚಾರ ಮಹಾ ನಿರ್ದೇಶನಾಲಯ ಆರಂಭಿಸಿದೆ’’ ಎಂದು ಅದು ತಿಳಿಸಿದೆ.

ಮಹಿಳೆಯರು ವಾಹನ ಚಲಾಯಿಸುವುದರ ಮೇಲೆ ದಶಕಗಳಿಂದ ಇರುವ ನಿಷೇಧವನ್ನು ಜೂನ್ 24ರಂದು ತೆರವುಗೊಳಿಸಲು ಸೌದಿ ಅರೇಬಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.

ಸದ್ಯಕ್ಕೆ ಮಹಿಳೆಯರ ವಾಹನ ಚಾಲನೆಗೆ ಅವಕಾಶ ನೀಡದ ಪ್ರಪಂಚದ ಏಕೈಕ ದೇಶ ಸೌದಿ ಅರೇಬಿಯವಾಗಿದೆ.

ಸೌದಿ ಅರೇಬಿಯದಾದ್ಯಂತದ ಹಲವಾರು ಸ್ಥಳಗಳಲ್ಲಿ ಸೌದಿ ಪ್ರಜೆಗಳ ಅಂತಾರಾಷ್ಟ್ರೀಯ ಚಾಲನಾ ಪರವಾನಿಗೆಗಳ ಬದಲಿಗೆ ಅಧಿಕಾರಿಗಳು ಸೌದಿ ಚಾಲನಾ ಪರವಾನಿಗೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಹಿಳೆಯರಿಗೆ ‘ಪ್ರಾಯೋಗಿಕ ಪರೀಕ್ಷೆ’ಯನ್ನು ನೀಡಲಾಯಿತು.

ಎಷ್ಟು ಪರವಾನಿಗೆಗಳನ್ನು ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿಲ್ಲ.

 ಈ ಬೆಳವಣಿಗೆಯು ಸೌದಿ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ದೂರಗಾಮಿ ಪರಿಣಾಮದ ಸುಧಾರಣಾ ಕ್ರಮಗಳ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News