×
Ad

ಅಗಲಿದ ಪತ್ರಿಕಾ ಛಾಯಾಗ್ರಾಹಕರಿಗೆ ನುಡಿ ನಮನ

Update: 2018-06-07 18:31 IST

ಮಂಗಳೂರು, ಜೂ.7: ಪತ್ರಿಕಾ ಛಾಯಾಚಿತ್ರಗ್ರಾಹಕರಾಗಿ ಪ್ರಸಿದ್ಧರಾಗಿದ್ದ ದಿವಂಗತ ಕೇಶವ ವಿಟ್ಲ ಅವರಿಗೆ ನಗರದಲ್ಲಿಂದು ‘ಕೇಶವ ಸ್ಮತಿ’ ಹೆಸರಿನಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು.

ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಕೇಶವ ವಿಟ್ಲ ಬಳಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಕೇಶವ ವಿಟ್ಲ ಅವರ ಜತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.

ತಾನೊಬ್ಬ ಫೋಟೋಗ್ರಾಫರ್ ಎಂದು ಕರೆಸಿಕೊಳ್ಳುವುದಕ್ಕೆ ಬದಲಾಗಿ ಫೋಟೋ ಜರ್ನಲಿಸ್ಟ್ ಎಂದು ಕರೆಸಿಕೊಳ್ಳಲು ಬಯಸುತ್ತಿದ್ದ ಕೇಶವ ವಿಟ್ಲ, ಸಮಯ ಪ್ರಜ್ಞೆಯ ಛಾಯಾಗ್ರಾಹಕರಾಗಿದ್ದರು. ಅವರ ಸಾಧನೆಗೆ ಯಾವ ರೀತಿಯ ಗೌರವ, ಸನ್ಮಾನ ಸಿಗಬೇಕಿತ್ತೋ ಅದು ಅವರಿಗೆ ಸಿಕ್ಕಿಲ್ಲ ಎಂಬುದು ಮಾತ್ರ ಬೇಸರದ ಸಂಗತಿ. ಹಾಗಿದ್ದರೂ ಅದಕ್ಕಾಗಿ ಅವರು ಹಾತೊರೆದಿರಲಿಲ್ಲ, ಬಯಸಿರಲಿಲ್ಲ. ವೃತ್ತಿಪರತೆಯೊಂದಿಗೆ ತಮ್ಮ ಸೃಜನಶೀಲತೆಯನ್ನು ತಮ್ಮ ಛಾಯಾಚಿತ್ರಗಳ ಮೂಲಕ ಅವರು ವ್ಯಕ್ತಪಡಿಸಿದ್ದರು ಎಂದು ಚಿದಂಬರ ಬೆಕಂಪಾಡಿ ನುಡಿನಮನ ಸಲ್ಲಿಸಿದರು.

ಖ್ಯಾತ ಛಾಯಾಗ್ರಾಹಕ ಯಜ್ಞ ಮಂಗಳೂರು ಮಾತನಾಡಿ, ಕೇಶವ ವಿಟ್ಲ ವೃತ್ತಿಯಲ್ಲಿ ತನ್ನ ಸ್ಪರ್ಧಿಯಾಗಿದ್ದರೂ, ನಮ್ಮಲ್ಲಿ ಯಾವತ್ತೂ ವೃತ್ತಿ ಮಾತ್ಸರ್ಯವಿರಲಿಲ್ಲ. ಬೆಂಗಳೂರಿಗೆ ವೃತ್ತಿ ನಿಮಿತ್ತ ಕೇಶವ ವಿಟ್ಲ ತೆರಳಿದ್ದರೂ ಮಂಗಳೂರಿಗೆ ಆಗಮಿಸುತ್ತಿದ್ದ ಸಂದರ್ಭ ನನ್ನನ್ನು ಭೇಟಿಯಾಗಿಯೇ ಹೋಗುತ್ತಿದ್ದರು. ಅಂತಹ ಒಡನಾಟ ನಮ್ಮದಾಗಿತ್ತು ಎಂದು ನೆನಪಿಸಿಕೊಂಡರು.

ಇನ್ನೋರ್ವ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಮಾತನಾಡಿ, ಕೇಶವ ವಿಟ್ಲ ಹಾಗೂ ಯಜ್ಞ ಮಂಗಳೂರು ಅವರ ಛಾಯಾಗ್ರಹಣವನ್ನು ಮಾದರಿಯಾಗಿಸಿಕೊಂಡೇ ನನ್ನಂತಹ ಅನೇಕ ಛಾಯಾಗ್ರಾಹರು ಈ ಕ್ಷೇತ್ರದಲ್ಲಿ ಬೆಳೆದಿದ್ದೇವೆ. ಛಾಯಾಗ್ರಾಹಕರಾಗಿ ಸೃಜನಶೀಲತೆಯನ್ನು ಛಾಯಾಗ್ರಹಣದಲ್ಲಿ ಅಳವಡಿಸಿಕೊಂಡಿದ್ದ ಕೇಶವ ವಿಟ್ಲ, ಪತ್ರಿಕಾ ಛಾಯಾಗ್ರಾಹಕರಾಗಿದ್ದುಕೊಂಡು ದುಡ್ಡು ಮಾಡಿಲ್ಲದ ಛಾಯಾ್ರಾಹಕರಲ್ಲಿ ಅವರೊಬ್ಬರು ಎಂದರು.

ಕಾರ್ಯಕ್ರಮದಲ್ಲ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ರಘುನಾಥ ಸುವರ್ಣ, ನಿಸರ್ಗ ಮಂಜುನಾಥ್ ಮೊದಲಾವರು ನುಡಿ ನಮನ ಸಲ್ಲಿಸಿದರು.
ಹಿರಿಯ ಪತ್ರಕರ್ತ ತಾರನಾಥ ಕಾಪಿಕಾಡ್ ಸ್ವಾಗತಿಸಿ, ಕೇಶವ ವಿಟ್ಲರ ಪರಿಚಯ ನೀಡಿದರು.

ಕಾರ್ಯಕ್ರಮದಲ್ಲಿ ಕೇಶವ ವಿಟ್ಲ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಕೇಶವ ವಿಟ್ಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಅಗಲಿದ ಚೇತನದ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News