×
Ad

ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ

Update: 2018-06-07 20:01 IST

ಉಡುಪಿ, ಜೂ.7: ಹತ್ತು ವರ್ಷಗಳ ಹಿಂದೆ ನಕ್ಸಲರಿಂದ ಹತ್ಯೆಗೀಡಾದ ಹೆಬ್ರಿ ಭೋಜ ಶೆಟ್ಟಿ ಪ್ರಕರಣದ ವಿಚಾರಣೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕಳೆದ ನಾಲ್ಕು ದಿನಗಳ ಕಾಲ ನಡೆದ ಬಳಿಕ ಇಂದು ಅದನ್ನು ಆಗಸ್ಟ್ 13-14ಕ್ಕೆ ಮುಂದೂಡಲಾಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅವರು ಈ ನಾಲ್ಕು ದಿನಗಳಲ್ಲಿ ಒಟ್ಟು 26 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿದರು. ಮೊದಲ ದಿನ 7, ಎರಡನೇ ದಿನ 12, ಮೂರನೇ ದಿನ 3 ಹಾಗೂ ಇಂದು ನಾಲ್ವರು ಸಾಕ್ಷದಾರರು ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ ಹೇಳಿದರು.

ಈ ಸಂದರ್ಭದಲ್ಲಿ ತಮಿಳುನಾಡಿನ ಕೊಯಮುತ್ತೂರು ಜೈಲಿನಲ್ಲಿದ್ದ ಈಶ್ವರ ಯಾನೆ ವೀರಮಣಿ, ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿನಲ್ಲಿದ್ದ ರಮೇಶ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಇವರೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನೀಲಗುಳಿ ಪದ್ಮನಾಭ ಮತ್ತು ಪಾವಗಡದ ಸಂಜೀವ ಕುಮಾರ್ ಕೂಡ ಹಾಜರಿದ್ದರು. ಉಡುಪಿ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಶನ್ ಶಾಂತಿ ಬಾಯಿ ಹಾಗೂ ಆರೋಪಿ ಪರ ವಕೀಲರಾದ ಶಾಂತರಾಮ್ ಶೆಟ್ಟಿ ಹಾಗೂ ಅಖಿಲ್ ಹೆಗ್ಡೆ ಉಪಸ್ಥಿತರಿದ್ದರು.

ನಕ್ಸಲ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ ಹೆಬ್ರಿ ಸೀತಾನದಿಯ ಶಿಕ್ಷಕರಾಗಿದ್ದ ಭೋಜ ಶೆಟ್ಟಿಯನ್ನು 2008ರ ಮೇ 15ರಂದು ನಕ್ಸಲರ ತಂಡ ಗುಂಡು ಹಾರಿಸಿ ಕೊಲೆ ಮಾಡಿತ್ತು. ಈ ವೇಳೆ ಭೋಜ ಶೆಟ್ಟಿ ಜೊತೆ ಇದ್ದ ನೆರೆಮನೆಯ ಸ್ನೇಹಿತ ಸುರೇಶ್ ಶೆಟ್ಟಿ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

11 ಮಂದಿ ಆರೋಪಿಗಳಲ್ಲಿ ಮನೋಹರ್ ಕಳಸದಲ್ಲಿ, ವಸಂತ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ದೇವೇಂದ್ರ, ನಂದಕುಮಾರ್, ಚಂದ್ರಶೇಖರ್, ಆಶಾ ಈಗಾಗಲೇ ಖುಲಾಸೆ ಗೊಂಡಿದ್ದಾರೆ. ಬಿ.ಜೆ.ಕೃಷ್ಣಮೂರ್ತಿಯನ್ನು ಈವರೆಗೆ ಬಂಧಿಸಿಲ್ಲ. ಉಳಿದಂತೆ ನೀಲಗುಳಿ ಪದ್ಮನಾಭ, ರಮೇಶ್, ವೀರಮಣಿ, ಸಂಜೀವ ಕುಮಾರ್ ವಿರುದ್ಧ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News