ಸಿಂಹಳದ ಪ್ರಚೋದನಾತ್ಮಕ ಭಾಷೆ ಕಲಿಯುತ್ತಿರುವ ಫೇಸ್‌ಬುಕ್ !
ಕೊಲಂಬೊ, ಜೂ. 7: ಶ್ರೀಲಂಕಾದಲ್ಲಿ ಭೀಕರ ಮುಸ್ಲಿಮ್ ವಿರೋಧಿ ಗಲಭೆಗಳು ನಡೆದ ಮೂರು ತಿಂಗಳ ಬಳಿಕ, ಸ್ಥಳೀಯ ಭಾಷೆಗಳಲ್ಲಿ ಇರುವ ಪ್ರಚೋದನಾತ್ಮಕ ಪದಗಳನ್ನು ಗುರುತಿಸಲು ತನ್ನ ಸಿಬ್ಬಂದಿಗೆ ಫೇಸ್‌ಬುಕ್ ತರಬೇತಿ ನೀಡುತ್ತಿದೆ.
ಶ್ರೀಲಂಕಾದ ಬೌದ್ಧ ಉಗ್ರವಾದಿಗಳು ಮಾರ್ಚ್‌ನಲ್ಲಿ ದ್ವೇಷಪೂರಿತ ಸಂದೇಶಗಳನ್ನು ಪ್ರಸಾರ ಮಾಡಲು ಫೇಸ್‌ಬುಕನ್ನು ಬಳಸಿದ್ದರು. ಇದರ ಫಲವಾಗಿ ದ್ವೀಪರಾಷ್ಟ್ರದಲ್ಲಿ ಮುಸ್ಲಿಮ್ ವಿರೋಧಿ ಗಲಭೆ ಸ್ಫೋಟಿಸಿತು.
ಗಲಭೆಯಲ್ಲಿ ಮೂವರ ಮೃತಪಟ್ಟರು ಹಾಗೂ ನೂರಾರು ಮಸೀದಿಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಬೂದಿಯಾದವು.
ಈ ಹಿನ್ನೆಲೆಯಲ್ಲಿ, ಶ್ರೀಲಂಕಾ ಅಧಿಕಾರಿಗಳು ಫೇಸ್‌ಬುಕ್‌ಗೆ ನಿರ್ಬಂಧ ವಿಧಿಸಿದ್ದರು. ಫೇಸ್‌ಬುಕ್ ನಿಷೇಧವು ಒಂದು ವಾರದವರೆಗೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ, ದ್ವೇಷ ಭಾಷಣಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶ್ರೀಲಂಕಾ ಅಧಿಕಾರಿಗಳು ಮಾಡಿದ ಮನವಿಗೆ ಫೇಸ್‌ಬುಕ್ ಯಾವುದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ.
ಅದೇ ಸಂದರ್ಭದಲ್ಲಿ, ಸುಳ್ಳು ಸುದ್ದಿ (ಫೇಕ್ ನ್ಯೂಸ್), ಮಾಹಿತಿ ಸೋರಿಕೆ ಮತ್ತು ಖಾಸಗಿತನ ಉಲ್ಲಂಘನೆ ವಿಚಾರಗಳಲ್ಲಿ ಫೇಸ್‌ಬುಕ್ ಜಾಗತಿಕ ಆಕ್ರೋಶಕ್ಕೆ ಗುರಿಯಾಗಿತ್ತು.
‘‘ನಾವು ತಪ್ಪು ಮಾಡಿದೆವು ಹಾಗೂ ಪ್ರತಿಕ್ರಿಯೆ ನೀಡುವಲ್ಲಿ ವಿಳಂಬ ಮಾಡಿದೆವು’’ ಎಂದು ಫೇಸ್‌ಬುಕ್ ವಕ್ತಾರೆ ಅಮೃತ್ ಅಹುಜ ಕೊಲಂಬೊದಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘ಸಿಂಹಳ ಭಾಷೆ ಮಾತನಾಡುವವರನ್ನು ನಾವು ಕೆಲಸಕ್ಕೆ ನೇಮಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ’’ ಎಂದು ಅಹುಜ ತಿಳಿಸಿದರು.
‘‘ಸಿಂಹಳ ಭಾಷೆಯ ನಿಂದನೆ ಮಾತುಗಳು ಮತ್ತು ಜನಾಂಗೀಯ ನಿಂದನೆಗಳ ಬಗ್ಗೆ ತಿಳಿದುಕೊಳ್ಳಲು ಫೇಸ್‌ಬುಕ್ ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ’’ ಎಂದರು.