×
Ad

48 ಗಂಟೆಯೊಳಗೆ ಎನ್ಆರ್ ಐಗಳ ವಿವಾಹ ನೋಂದಣಿ ಮಾಡದಿದ್ದರೆ ವೀಸಾ, ಪಾಸ್ ಪೋರ್ಟ್ ಇಲ್ಲ!

Update: 2018-06-07 22:02 IST

ಹೊಸದಿಲ್ಲಿ, ಜೂ. 7: ಭಾರತದಲ್ಲಿ ನಡೆಯುವ ಅನಿವಾಸಿ ಭಾರತೀಯರ ವಿವಾಹವನ್ನು 48 ಗಂಟೆಗಳ ಒಳಗೆ ನೋಂದಣಿ ಮಾಡಬೇಕು ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಬುಧವಾರ ಹೇಳಿದ್ದಾರೆ. 48 ಗಂಟೆಗಳಲ್ಲಿ ವಿವಾಹ ನೋಂದಣಿ ಮಾಡದೇ ಇದ್ದರೆ, ಪಾಸ್‌ಪೋರ್ಟ್ ಹಾಗೂ ವೀಸಾ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

 ಇದುವರೆಗೆ ಅನಿವಾಸಿ ಭಾರತೀಯರ ವಿವಾಹ ನೋಂದಣಿಗೆ ಸಮಯ ಮಿತಿ ಇರಲಿಲ್ಲ. ಆದಾಗ್ಯೂ, ವಿವಾಹ ನೋಂದಣಿಗೆ 30 ದಿನಗಳ ಸಮಯ ಮಿತಿಯನ್ನು ಕಾನೂನು ಆಯೋಗದ ವರದಿ ಶಿಫಾರಸು ಮಾಡಿತ್ತು. ಅನಂತರ ನೋಂದಣಿ ಮಾಡುವವರಿಗೆ ದಿನವೊಂದಕ್ಕೆ 5 ರೂ. ದಂಡ ವಿಧಿಸುವಂತೆ ತಿಳಿಸಿತ್ತು. ಅನಿವಾಸಿ ಭಾರತೀಯರ ವಿವಾಹಗಳ ವಿವರ ಒದಗಿಸಬೇಕು. ಇದರಿಂದ ಕೇಂದ್ರ ದತ್ತಾಂಶ ನಿರ್ವಹಿಸಲು ಸಾಧ್ಯ ಎಂದು ನೋಂದಣಿದಾರರಿಗೆ ಆದೇಶ ನೀಡುವ ಪ್ರಕ್ರಿಯೆಯಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ತೊಡಗಿದೆ ಎಂದು ಅವರು ಹೇಳಿದ್ದಾರೆ.

 ಅನಿವಾಸಿ ಭಾರತೀಯರ ವೈವಾಹಿಕ ವಿವಾದ ಪರಿಹರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಸಮಗ್ರ ನೋಡಲ್ ಸಂಸ್ಥೆಯನ್ನು ಸಚಿವಾಲಯ ಈ ಹಿಂದೆ ರೂಪಿಸಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News