ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ ಎಂದ ಶಿವಸೇನೆ

Update: 2018-06-07 16:40 GMT

ಮುಂಬೈ, ಜೂ. 7: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಶಿವಸೇನೆ ಗುರುವಾರ ಹೇಳಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ 24 ಗಂಟೆಗಳ ಬಳಿಕವೂ ಶಿವಸೇನೆ ತನ್ನ ನಿಲುವು ಬದಲಿಸಿಕೊಂಡಿಲ್ಲ.

 ‘‘ನಮಗೆ ಅಮಿತ್ ಶಾ ಅವರ ಅಜೆಂಡಾ ಗೊತ್ತಿದೆ. ಆದರೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸುವುದಾಗಿ ಶಿವಸೇನೆ ನಿರ್ಧಾರ ತೆಗೆದುಕೊಂಡಿದೆ.’’ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸ ‘ಮಾತೋಶ್ರಿ’ಯಲ್ಲಿ ನಡೆದ ಸಭೆಯ ಬಳಿಕ ಶಿವಸೇನೆಯ ನಿರ್ಧಾರ ಬಿಜೆಪಿಯ ಎಲ್ಲ ಆಕಾಂಕ್ಷೆಗಳಿಗೆ ತಣ್ಣೀರೆರೆಚಿದೆ. ಆದರೂ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಜೊತೆಯಾಗಿ ಸ್ಪರ್ಧಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 ಬಿಜೆಪಿಯ ‘ಸಮರ್ಥರಾಗಲು ಸಂಪರ್ಕ’ ಕಾರ್ಯಕ್ರಮದ ಭಾಗವಾಗಿ ನಡೆದ ಸಭೆಯ ಬಳಿಕ ಅಮಿತ್ ಶಾ, ಸಭೆ ಸಕಾರಾತ್ಮಕವಾಗಿತ್ತು ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಜೊತೆಯಾಗಿ ಸ್ಪರ್ಧಿಸಲಿ ವೆ ಎಂದಿದ್ದರು. ಇನ್ನೆರೆಡು ದಿನಗಳಲ್ಲಿ ಮತ್ತೆ ಬಿಜೆಪಿ ಹಾಗೂ ಶಿವಸೇನೆ ಸಭೆ ನಡೆಯಲಿದೆ ಎಂದು ಸಂಜಯ್ ರಾವತ್ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News