ಭಯೋತ್ಪಾದಕರ ನಡುವೆ ತಾರತಮ್ಯ ಮಾಡದೆ ಕ್ರಮ ತೆಗೆದುಕೊಳ್ಳಿ: ಪಾಕಿಸ್ತಾನಕ್ಕೆ ಅಮೆರಿಕ ತಾಕೀತು
ವಾಶಿಂಗ್ಟನ್, ಜೂ. 7: ದಕ್ಷಿಣ ಏಶ್ಯದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಭಯೋತ್ಪಾದಕರು ಮತ್ತು ಬಂಡುಕೋರರನ್ನು ನಿರ್ಮೂಲಗೊಳಿಸುವುದು ಅಗತ್ಯವಾಗಿದೆ ಎಂಬ ತನ್ನ ನಿಲುವನ್ನು ಅಮೆರಿಕ ಪಾಕಿಸ್ತಾನಕ್ಕೆ ಪುನರುಚ್ಚರಿಸಿದೆ.
ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸುವ ಹಾಗೂ ಮುಂದುವರಿಸಿಕೊಂಡು ಬರುವ ಭಯೋತ್ಪಾದಕರಿಗೆ ಬೆಂಬಲ ನೀಡುವ ಹಾಗೂ ಹಾಗೆ ಮಾಡದವರನ್ನು ವಿರೋಧಿಸುವ ತನ್ನ ನೀತಿಯನ್ನು ಪಾಕಿಸ್ತಾನ ಸರಕಾರ ಇನ್ನೂ ಬಿಟ್ಟಿಲ್ಲ ಎಂದು ಅದು ಹೇಳಿದೆ.
ಈ ವಿಷಯದ ಬಗ್ಗೆ ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಕಮರ್ ಬಾಜ್ವ ಜೊತೆ ಬುಧವಾರ ಚರ್ಚೆ ನಡೆಸಿದರು ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೋವರ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಭಾರತ ಮತ್ತು ಅಫ್ಘಾನಿಸ್ತಾನಗಳಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವ ಭಯೋತ್ಪಾದಕರನ್ನು ಪಾಕಿಸ್ತಾನ ‘ಒಳ್ಳೆಯ ಭಯೋತ್ಪಾದಕರು’ ಎಂಬುದಾಗಿ ಪರಿಗಣಿಸುತ್ತದೆ ಹಾಗೂ ಅವರಿಗೆ ಬೆಂಬಲ ನೀಡುತ್ತದೆ ಎಂಬುದಾಗಿ ಆರೋಪಿಸಲಾಗಿದೆ.
ಅದೇ ವೇಳೆ, ಒಂದು ಕಾಲದ ತಮ್ಮ ಧಣಿಗಳಿಗೆ ತಿರುಗಿಬಿದ್ದು, ಅವರ ಶತ್ರುಗಳಿಗಾಗಿ ರೂಪಿಸಿದ್ದ ರಕ್ತಪಾತವನ್ನು ಅವರ ನೆಲ (ಪಾಕಿಸ್ತಾನ)ದಲ್ಲೇ ನಡೆಸುವ ಭಯೋತ್ಪಾದಕರ ವಿರುದ್ಧ ಮಾತ್ರ ಪಾಕಿಸ್ತಾನ ಕ್ರಮ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಮೇ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ, ಪಾಂಪಿಯೊ ಪಾಕಿಸ್ತಾನದ ಉನ್ನತ ದರ್ಜೆಯ ಅಧಿಕಾರಿಯೊಬ್ಬರೊಂದಿಗೆ ಮಾತುಕತೆ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಅವರ ಪೂರ್ವಾಧಿಕಾರಿ ರೆಕ್ಸ್ ಟಿಲರ್‌ಸನ್ ಪಾಕಿಸ್ತಾನಕ್ಕೆ ಒಮ್ಮೆ ಭೇಟಿ ನೀಡಿದ್ದರು ಹಾಗೂ ಅಲ್ಲಿನ ಉನ್ನತ ನಾಯಕತ್ವದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರು.