ಉಬ್ಬಿದ ರಕ್ತನಾಳಗಳನ್ನು ಹೊಂದಿರುವವರು ಸೇನೆಗೆ ಸೇರಲು ಅನರ್ಹರು: ಹೈಕೋರ್ಟ್

Update: 2018-06-08 12:50 GMT

ಹೊಸದಿಲ್ಲಿ, ಜೂ.8: ಸೇನೆ ಅಥವಾ ಅರೆಸೇನಾ ಪಡೆಗೆ ಸೇರಬಯಸುವವರು ತಾವು ವೆರಿಕೋಸ್ ವೇಯ್ನ್ಸ್ ಅಥವಾ ಉಬ್ಬಿದ ರಕ್ತನಾಳಗಳನ್ನು ಹೊಂದಿಲ್ಲವೆನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಲಿದೆ. ಇಂತಹ ರಕ್ತನಾಳಗಳನ್ನು ಹೊಂದಿದ್ದು, ಬಳಿಕ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದ ಅಭ್ಯರ್ಥಿಯೋರ್ವ ಸಶಸ್ತ್ರ ಪಡೆಗಳಿಗೆ ಸೇರಲು ಅನರ್ಹನಾಗಿದ್ದಾನೆ ಎಂದು ತೀರ್ಪು ನೀಡಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಇಂತಹ ಉದ್ಯೋಗದಲ್ಲಿ ದುರ್ಗಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳು ಅಗತ್ಯವಾಗುತ್ತವೆ ಎಂದು ಬೆಟ್ಟುಮಾಡಿದೆ.

ಉಬ್ಬಿದ ರಕ್ತನಾಳಗಳಿರುವರು ಕಾಲುಗಳಲ್ಲಿ ನೋವು ಅನುಭವಿಸುತ್ತಿರುತ್ತಾರೆ. ಅವರಿಗೆ ಸುದೀರ್ಘ ಅವಧಿಗೆ ನಿಲ್ಲಲು ಅಥವಾ ನಡೆಯಲು ಸಾಧ್ಯವಾಗುವುದಿಲ್ಲ,ರಾತ್ರಿಗಳಲ್ಲಿ ಕಾಲುಗಳಲ್ಲಿ ತುರಿಕೆ ಮತ್ತು ಸೆಳೆತವುಂಟಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಅವರಿಗೆ ಚರ್ಮರೋಗವೂ ಉಂಟಾಗುತ್ತದೆ ಮತ್ತು ಇದು ಹುಣ್ಣುಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ಸ್ಪಷ್ಟಪಡಿಸಿವೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪ್ರತಿಭಾ ರಾಣಿ ಅವರ ಪೀಠವು,ಉಬ್ಬಿದ ರಕ್ತನಾಳಗಳಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡವರಲ್ಲಿ ರಕ್ತ ಪರಿಚಲನೆಗೆ ವ್ಯತ್ಯಯವುಂಟಾಗುತ್ತದೆ,ಅಲ್ಲದೆ ಬೇರೆ ರಕ್ತನಾಳಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ ಎಂದೂ ತಿಳಿಸಿತು.

ಇವುಗಳನ್ನು ಪರಿಗಣಿಸಿದರೆ ಈ ಸಮಸ್ಯೆಯಿರುವವರು ನಾಗರಿಕ ಹುದ್ದೆಗಳಿಗೆ ಅರ್ಹರಾಗಿರಬಹುದು,ಆದರೆ ಸೇನೆ/ಅರೆಸೇನಾ ಪಡೆಗಳಲ್ಲಿ ಕಾರ್ಯ ನಿರ್ವಹಿಸಲು ಅವರು ಅನರ್ಹರಾಗಿದ್ದಾರೆ ಎಂದು ಪೀಠವು ಎತ್ತಿ ಹಿಡಿಯಿತು.

ಅಭ್ಯರ್ಥಿಯು ಸೇನೆಯಲ್ಲಿ ನೇಮಕಾತಿಗೆ ಅನರ್ಹನಾಗಿದ್ದಾನೆ ಎಂಬ ವ್ಯೆದ್ಯಕೀಯ ಮಂಡಳಿಯ ನಿರ್ಧಾರದಲ್ಲಿ ತಪ್ಪುಗಳಿಲ್ಲ ಮತ್ತು ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುನ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿತು.

2015ರಲ್ಲಿ ಸಿಎಪಿಎಫ್,ಎನ್‌ಐಎ ಮತ್ತು ಎಸ್‌ಎಸ್‌ಎಫ್‌ಗಳಲ್ಲಿ ಕಾನ್‌ಸ್ಟೇಬಲ್ ಹುದ್ದೆಗಾಗಿ ಸಂಯುಕ್ತ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ತಾನು ತೇರ್ಗಡೆಯಾಗಿದ್ದರೂ,ದೈಹಿಕ ಪರೀಕ್ಷೆಯಲ್ಲಿ ತನ್ನನ್ನು ವೈದ್ಯಕೀಯವಾಗಿ ಅನರ್ಹನೆಂದು ಘೋಷಿಸಲಾಗಿದೆ ಎಂದು ಅಭ್ಯರ್ಥಿ ತನ್ನ ಅರ್ಜಿಯಲ್ಲಿ ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News