ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಪತನ: - ಡಿ.ವಿ.ಸದಾನಂದ ಗೌಡ

Update: 2018-06-08 15:12 GMT

ಪುತ್ತೂರು, ಜೂ. 8: ರಾಜ್ಯದಲ್ಲಿ ಮಂತ್ರಿಮಂಡಲ ಸೇರ್ಪಡೆಗಾಗಿ ಬೀದಿ ಜಗಳ ಹೆಚ್ಚುತ್ತಿದೆ. ಅಧಿಕಾರ ಪಡೆಯಲು ಹಿಂಬಾಗಿಲಿನಿಂದ ಬಂದರೂ ಉತ್ತಮ ಆಡಳಿತ ನೀಡಲು ಇವರಿಂದ ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಈ ಸರಕಾರ ಪತನ ಗೊಳ್ಳುವುದು ನಿಶ್ವಿತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭವಿಷ್ಯ ನುಡಿದರು.

ನೈರುತ್ಯ ಪದವೀಧರ ಕೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಪುತ್ತೂರಿಗೆ ಶುಕ್ರವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಪ್ಪನಾಣೆಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡು ಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗ ’ಮಕ್ಕಳಾಣೆ’ ಅಡಿಯಲ್ಲಿ ಅಧಿಕಾರ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದ ಅವರು ಇವರು ನಡೆಸುತ್ತಿರುವ ಬೀದಿ ಜಗಳ ಪ್ರಜಾಪ್ರಭುತ್ವದ ಅಪಮೌಲ್ಯವಾಗಿದೆ. ಈಗ ರಾಜ್ಯದಲ್ಲಿ ನಡೆಯುತ್ತಿರುವುದು ಎರಡು ಪಕ್ಷಗಳು ಮಾಡಿಕೊಂಡ ಸ್ವಯಂಕೃತ ಅಪರಾಧವಾಗಿದೆ ಎಂದರು.

ಮಂತ್ರಿಮಂಡಲ ರಚನೆಯಾದರೂ ಕರ್ನಾಟಕ ಕಾಂಗ್ರೆಸ್ ನಲ್ಲಿ ಪ್ರಸ್ತುತ ಡಿಕೆಶಿ ಹೈಕಮಾಂಡ್ ಆಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲು ಡಿ.ಕೆ.ಶಿವಕುಮಾರ್ ಭಯವಿದೆ. ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ತಮ್ಮ ಪಕ್ಷದ ವತಿಯಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಖಾತೆಯನ್ನು ಪ್ರಕಟಿಸಲಿ ಎಂದು ದೇವೇಗೌಡರಿಗೆ ಸವಾಲು ಹಾಕಿದ ಡಿ.ವಿ. ಸದಾನಂದ ಗೌಡ ಜೆಡಿಎಸ್ ನಲ್ಲೂ ಬಂಡಾಯದ ಬಿಸಿ ಇದೆ. ಹಾಗಾಗಿ ಖಾತೆ ಪ್ರಕಟಿಸಲು ಭಯವಿದೆ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ. ಕಾಂಗ್ರೆಸ್ ನ ಹಿರಿಯರನ್ನು ಪರಿಗಣಿಸದೆ ಇರುವ ಬಗ್ಗೆ ಅವರ ಬೆಂಬಲಿಗರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಇದು ಮಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷದ ಭವಿಷ್ಯವನ್ನು ಡೋಲಾಯಮಾನ ವಾಗಿಸಲಿದೆ ಎಂದರು.

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದ ಆಟದಲ್ಲಿ ಬಂಡಾಯದಿಂದ ಸಮ್ಮಿಶ್ರ ಸರಕಾರ ಬೀದಿಪಾಲು ಆಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೌರವಯುತವಾಗಿ ರಾಜೀನಾಮೆ ಕೊಡುವುದು ಸೂಕ್ತ. ಸಮ್ಮಿಶ್ರ ಸರಕಾರಗಳು ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲೂ ರಚನೆಯಾಗಿವೆ. ಆದರೆ ಕಾಂಗ್ರೇಸ್ ಮತ್ತು ಜೆಡಿಎಸ್ ಸೇರಿಕೊಂಡು ಮಾಡಿರುವ ಸಮ್ಮಿಶ್ರ ಸರಕಾರ ಲಜ್ಜಾಹೀನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸರಕಾರವಾಗಿದೆ ಎಂದವರು ಹೇಳಿದರು.

ಶಿಕ್ಷಕ ಕೇತ್ರ ಹಾಗೂ ಪದವೀಧರ ಕ್ಷೇತ್ರದಲ್ಲಿ ಮತದಾರರು ವಿದ್ಯಾವಂತರು ಹಾಗಾಗಿ ಬಿಜೆಪಿ ಗೆಲುವಿಗೆ ಯಾವುದೇ ಆತಂಕವಿಲ್ಲ ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಜೆಡಿಎಸ್ ಒಗ್ಗೂಡಿದರೂ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ದೇವೇ ಗೌಡರು 28 ಸ್ಥಾನ ಕೇಳುತ್ತಿದ್ದಾರೆ. ಕಾಂಗ್ರೇಸ್ ನವರೂ 28 ಕೇಳುತ್ತಿದ್ದಾರೆ. ಅದರರ್ಥ ಅವರಾಗಿಯೇ ಕುಸಿತ ಕಂಡುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News