ಕೆಸರುಮಯವಾದ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ
ಪುತ್ತೂರು, ಜೂ. 8: ಐದು ತಿಂಗಳ ಹಿಂದೆ ಆರಂಭಗೊಂಡಿದ್ದ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಆರ್ಯಾಪು ಗ್ರಾಮದ ಬೇಜಾರು ಎಂಬಲ್ಲಿ ಸುಮಾರು 100 ಮೀಟರ್ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಈ ಭಾಗದಲ್ಲಿ ಮಣ್ಣು ತುಂಬಿಸಿ ರಸ್ತೆಯನ್ನು ಎತ್ತರಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಇತರ ರಸ್ತೆಗಳನ್ನು ಆಶ್ರಯಿಸಿಕೊಂಡು ಸುತ್ತು ಬಳಸಿ ತೆರಳಬೇಕಾಗಿದೆ.
ಪುತ್ತೂರು ನಗರದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಬೇಜಾರು ಎಂಬಲ್ಲಿ 100 ಮೀಟರ್ ಉದ್ದದಲ್ಲಿ ಅಪಘಾತ ವಲಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆ ಭಾಗದಲ್ಲಿ ತಗ್ಗು ಮತ್ತು ತಿರುವು ಹೊಂದಿದ್ದ ರಸ್ತೆಯನ್ನು ಸಂಪೂರ್ಣ ಎತ್ತರಿಸಿ, ಎರಡೂ ಕಡೆ ಭದ್ರ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಸ್ಲ್ಯಾಬ್‌ನ ಚರಂಡಿ ನಿರ್ಮಿಸಿ ಅಭಿವೃದ್ಧಿ ಪಡಿಸುವ ಕೆಲಸ ಆಗುತ್ತಿದೆ. ಈ ಕಾಮಗಾರಿಯನ್ನು ಜೂನ್ ಮೊದಲೇ ಮುಗಿಸದೆ , ಈ ಭಾಗದಲ್ಲಿ ಮಳೆಯ ನಡುವೆಯೇ ಮಣ್ಣಿನ ಕೆಲಸ ಮುಂದುವರಿಸಿದ ಕಾರಣ ಕಾಮಗಾರಿ ನಡೆಯುತ್ತಿರುವ ರಸ್ತೆ ಭಾಗ ಸಂಪೂರ್ಣ ಕೆಸರುಮಯವಾಗಿದೆ. ವಾಹನಗಳು ಓಡಾಡಲು ಮತ್ತು ಪಾದಾಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಕಾಣಿಯೂರು, ಸವಣೂರು, ಪುತ್ತೂರು ಮೂಲಕವಾಗಿ ಕುಂಜೂರುಪಂಜ, ದೇವಸ್ಯ, ಪುಣಚ, ಬುಳೇರಿಕಟ್ಟೆ, ಸಾಜ ಮೂಲಕ ಕೇರಳ ರಾಜ್ಯದ ಮಂಜೇಶ್ವರ ಸಂಪರ್ಕಿಸುವ ಈ ಹೆದ್ದಾರಿಯು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಶಕುಂತಳಾ ಶೆಟ್ಟಿ ಅವರು ಶಾಸಕಿಯಾಗಿದ್ದ ಅವಧಿಯಲ್ಲಿ ಕುಂಜೂರುಪಂಜ -ದೇವಸ್ಯ ಬಳಿಯ ಅಪಘಾತ ವಲಯ ಅಭಿವೃದ್ಧಿಗಾಗಿ ಇಲ್ಲಿಗೆ 4.80 ಕೋಟಿ ರೂ. ಮಂಜೂರಾಗಿತ್ತು. ಬಳಿಕ 18 ಸೆಂಟ್ಸ್ ಖಾಸಗಿ ಜಮೀನು ಸ್ವಾಧೀನಪಡಿಸಿಕೊಂಡು ಇಲ್ಲಿ ಕೆಲಸ ಆರಂಭಿಸಲಾಗಿತ್ತು. ಬೆಂಗಳೂರಿನ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (ಪಿಆರ್‌ಎಎಮ್‌ಸಿ) ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಮಳೆಗಾಲ ಆರಂಭಗೊಳ್ಳುವ ತನಕವೂ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಇದೀಗ ಸಮಸ್ಯೆಗೆ ಕಾರಣವಾಗಿದೆ. ಚೆನ್ನರಾಯಪಟ್ಟಣದ ನಾಗೇಶ್ ಎಂಬವರು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲಸದಲ್ಲಿ ಎಲ್ಲೂ ಲೋಪ ಆಗಿಲ್ಲ. ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸಿ ಎತ್ತರಿಸಲಾಗಿದೆ. ಎರಡು ಕಡೆ 7 ಮೀಟರ್ ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಮೋರಿಗೆ ಪೈಪ್ ಹಾಕುವ ಪ್ರಸ್ತಾಪವಿದ್ದರೂ ನಂತರ ಅದನ್ನು ಬದಲಾಯಿಸಿ ಸ್ಥಳದಲ್ಲೇ 20 ಮೀಟರ್ ಉದ್ದ, 2 ಮೀಟರ್ ಎತ್ತರ, 2 ಮೀ. ಅಗಲದ ಕಾಂಕ್ರೀಟ್ ಸ್ಲ್ಯಾಬ್‌ನ ಕಾಲುವೆ ನಿರ್ಮಿಸಲಾಗಿದೆ.
- ಪ್ರಮೋದ್ ಕುಮಾರ್, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ
ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಲು ಸಾಧ್ಯವಾಗದಿದ್ದರೆ ಆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಾರದಿತ್ತು. ಜೂನ್‌ಗೆ ಮೊದಲೇ ಕಾಮಗಾರಿ ಸ್ಥಳದಲ್ಲಿ ಜಲ್ಲಿ ಹಾಸಿ ಕೆಲಸ ನಿಲ್ಲಿಸಬಹುದಿತ್ತು. ಅಥವಾ ಒಂದು ಪಾರ್ಶ್ವದಿಂದ ರಸ್ತೆ ಯೋಗ್ಯಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬಹುದಿತ್ತು
- ಇಬ್ರಾಹಿಂ, ವಾಹನ ಚಾಲಕ