×
Ad

ಆರ್‌ಟಿಐ ಅರ್ಜಿಯಲ್ಲಿ ಪ್ರಶ್ನೆಗಳಿಗೆ ಅವಕಾಶವಿಲ್ಲ: ಮಾಹಿತಿ ಆಯುಕ್ತರು

Update: 2018-06-08 20:54 IST

ಮಂಗಳೂರು, ಜೂ. 8: ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿದಾರರು ಸ್ಪಷ್ಟ ಮತ್ತು ನಿಖರವಾದ ಮಾಹಿತಿಗಳನ್ನೇ ಕೋರಿ ಅರ್ಜಿ ಸಲ್ಲಿಸಬೇಕಾಗಿದ್ದು, ಪ್ರಶ್ನೆಗಳನ್ನು ಕೇಳಲು ಅವಕಾಶವಿಲ್ಲ ಎಂದು ಕರ್ನಾಟಕ ಮಾಹಿತಿ ಆಯುಕ್ತ ಎಂ.ಎನ್. ಚಂದ್ರೇಗೌಡ ತಿಳಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಹಕ್ಕು ಮೇಲ್ಮನವಿ ಪ್ರಕರಣಗಳ ವಿಚಾರಣೆ ನಡೆಸಿದ ಬಳಿಕ, ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಯಾವುದೇ ಪ್ರಶ್ನೆಗಳ ರೂಪದಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದರೆ, ಅವುಗಳನ್ನು ತಿರಸ್ಕರಿಸಬಹುದಾಗಿದೆ. ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಬೇಕು ಎಂದು ಅವರು ತಿಳಿಸಿದರು. ಕಚೇರಿಯಲ್ಲಿ ನಿಯಮಾನುಸಾರ ಆಡಳಿತ ನಡೆಸಿದರೆ ಮತ್ತು ಪಾರದರ್ಶಕ ಕರ್ತವ್ಯ ದಿಂದ ಆಡಳಿತ ಸುಲಲಿತವಾಗಲಿದೆ. ಮಾಹಿತಿ ಹಕ್ಕುಗಳ ಅರ್ಜಿಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಬೇಕು. ಒಬ್ಬನು ಎಷ್ಟೇ ಆರ್‌ಟಿಐ ಅರ್ಜಿ ಹಾಕಿದರೂ ಅಂತಹ ಅರ್ಜಿಗಳನ್ನು ಯಾವುದೇ ಲೋಪವಿಲ್ಲದೆ ಪರಿಗಣಿಸಬೇಕು. ಬಹಳಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಮೇಲ್ಮನವಿ ಸಲ್ಲಿಕೆಯಾಗುತ್ತವೆ. ಅಧಿಕಾರಿಗಳ ಲೋಪ ಕಂಡುಬಂದರೆ, ಅಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಮಾಹಿತಿ ಆಯೋಗವು ದಂಡ ವಿಧಿಸುತ್ತಿದೆ ಎಂದು ಆಯುಕ್ತರು ಹೇಳಿದರು.

ಮಾಹಿತಿ ಹಕ್ಕು ಕಾಯಿದೆ ಜಾರಿಯ ಹಿಂದೆ ಸಾಕಷ್ಟು ಹೋರಾಟಗಳು ಈ ದೇಶದಲ್ಲಿ ನಡೆದಿವೆ. ಸಾರ್ವಜನಿಕ ಆಡಳಿತದಲ್ಲಿ ಉತ್ತರದಾಯಿತ್ವವನ್ನು ತರುವುದು ಇದರ ಹಿಂದಿದೆ. ಇದನ್ನು ಅರಿತು ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬಹಳಷ್ಟು ಸರಕಾರಿ ಕಚೇರಿಗಳಲ್ಲಿ ನಿಯಮಾನುಸಾರ ಸಿದ್ಧಮಾಡಿಟ್ಟುಕೊಳ್ಳಬೇಕಾದ ಆರ್‌ಟಿಐ ಮಾಹಿತಿಗಳನ್ನು ಇಟ್ಟಿರುವುದಿಲ್ಲ. ಮಾಹಿತಿ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಚಂದ್ರೇಗೌಡ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ವೈಶಾಲಿ, ಉಪ ಪೋಲಿಸ್ ಆಯುಕ್ತ ಹನುಮಂತರಾಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಜೀತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News