ಪ್ರಧಾನ ಮಂತ್ರಿಗಳ ಪೊಲೀಸ್ ಪದಕ: ಸಿಆರ್‌ಪಿಎಫ್ ಯೋಧನಿಗೆ ಮರಣೋತ್ತರ ಪ್ರದಾನ

Update: 2018-06-08 16:12 GMT

ಹೊಸದಿಲ್ಲಿ, ಜೂ.8: ವೈಷ್ಣೋದೇವಿ ದೇವಸ್ಥಾನದಲ್ಲಿ 2016ರಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಸಿಲುಕಿಕೊಂಡಿದ್ದ ಯಾತ್ರಾರ್ಥಿಗಳನ್ನು ರಕ್ಷಿಸಿ ಕರ್ತವ್ಯ ನಿರ್ವಹಣೆಯಲ್ಲೇ ಮೃತಪಟ್ಟ ಸಿಆರ್‌ಪಿಎಫ್ ಯೋಧ ಹರ್ವೀಂದರ್ ಸಿಂಗ್‌ಗೆ ಪ್ರಧಾನಮಂತ್ರಿಗಳ ಪೊಲೀಸ್ ಪದಕವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ.

6ನೇ ಬೆಟಾಲಿಯನ್‌ನ ಯೋಧ ಹರ್ಮೀಂದರ್ ಸಿಂಗ್‌ರನ್ನು ವೈಷ್ಣೋದೇವಿ ದೇವಳದಲ್ಲಿ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು. 2016ರ ಆಗಸ್ಟ್ 24ರಂದು ಸಂಭವಿಸಿದ ಭೂಕುಸಿತದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಆಗಮಿಸಿದ್ದ ಯಾತ್ರಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದರು. ಈ ವೇಳೆ ಅವಶೇಷಗಳಡಿ ಕೆಲವು ಮಹಿಳೆಯರು ಹಾಗೂ ಮಕ್ಕಳು ಸಿಲುಕಿರುವುದನ್ನು ಗಮನಿಸಿದ್ದ ಸಿಂಗ್, ಅಪಾಯವನ್ನು ಲೆಕ್ಕಿಸದೆ ಮುನ್ನುಗ್ಗಿ ಅವರನ್ನು ರಕ್ಷಿಸಿದ್ದರು. ಆದರೆ ಈ ಸಂದರ್ಭ ಅವರ ಮೇಲೆ ಭಾರೀ ಬಂಡೆಕಲ್ಲೊಂದು ಉರುಳಿ ಬಿದ್ದ ಕಾರಣ ತೀವ್ರವಾಗಿ ಗಾಯಗೊಂಡಿದ್ದು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಾಣಕ್ಕೆ ಗಂಭೀರ ಅಪಾಯ ಇದ್ದ ಪರಿಸ್ಥಿತಿಯಲ್ಲೂ ಪ್ರಾಣದ ಹಂಗು ತೊರೆದು ಆದರ್ಶ ಮೆರೆದ ಹರ್ವೀಂದರ್ ಸಿಂಗ್‌ಗೆ ಪ್ರಧಾನ ಮಂತ್ರಿಯವರ ಪೊಲೀಸ್ ಪದಕವನ್ನು ಮರಣೋತ್ತರ ಪ್ರದಾನ ಮಾಡಲಾಗಿದೆ ಎಂದು ಸಿಆರ್‌ಪಿಎಫ್ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News