ಮಳೆಯ ನಡುವೆ ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಉಡುಪಿ, ಜೂ.8: ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶಾಂತಿಯುತ ಮತದಾನ ನಡೆಯಿತು. ಮಳೆಯ ನಡುವೆಯೇ, ಮತದಾನ ಕೇಂದ್ರಗಳಲ್ಲಿ ಮತದಾರರಾದ ಶಿಕ್ಷಕರು ಮತ್ತು ಪದವೀಧರರು ಸಾಲುಗಟ್ಟಿ ನಿಂತು ಮತದಾನ ಮಾಡಿದರು.
ಆದರೆ ಜಿಲ್ಲೆಯ ಶಿಕ್ಷಕರು ಮತ್ತು ಪದವೀಧರರು ಇಂದಿನ ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿಸಲ್ಲಿಲ್ಲ. ಶೇ.62.11ರಷ್ಟು ಪದವೀಧರರು ಹಾಗೂ ಶೇ.78ರಷ್ಟು ಶಿಕ್ಷಕರು ಮಾತ್ರ ಇಂದು ತಮ್ಮ ನೆಚ್ಚಿನ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದರು.
ಜಿಲ್ಲೆಯಲ್ಲಿ ನೊಂದಾಯಿತ 8276 ಪದವೀಧರ ಮತದಾರರಲ್ಲಿ 5140 ಮಂದಿ (ಶೇ.62.11) ಮತ ಚಲಾಯಿಸಿದರೆ, 2768 ಶಿಕ್ಷಕ ಮತದಾರರಲ್ಲಿ 2159 ಮಂದಿ (ಶೇ.78) ಮತ ಚಲಾಯಿಸಿದರು ಎಂದು ಚುನಾವಣಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.
ಪದವೀಧರ ಕ್ಷೇತ್ರದಲ್ಲಿ ಬೈಂದೂರಿನಲ್ಲಿ 338 ಮತದಾರರಲ್ಲಿ 240 ಮಂದಿ, ಶಂಕರನಾರಾಯಣದಲ್ಲಿ 405 ಮತದಾರರಲ್ಲಿ 259, ಕುಂದಾಪುರದಲ್ಲಿ 700-549, ಬ್ರಹ್ಮಾವರದಲ್ಲಿ 1378-768, ಮಣಿಪಾಲದಲ್ಲಿ 1036-569, ಉಡುಪಿಯಲ್ಲಿ 1863-1134, ಕಾಪುನಲ್ಲಿ 1394-799, ಅಜೆಕಾರುನಲ್ಲಿ 385-283, ಕಾರ್ಕಳದಲ್ಲಿ 776ರಲ್ಲಿ 539 ಮಂದಿ ಮತ ಚಲಾಯಿಸಿದರು. ಮತಗಟ್ಟೆ ನಂ.63ರಲ್ಲಿ ಅತ್ಯಧಿಕ ಶೇ.78.43ರಷ್ಟು ಮತದಾನವಾದರೆ, ಕನಿಷ್ಠ ಮತದಾನ ಮತಗಟ್ಟೆ ನಂ.64ಎಯಲ್ಲಿ ಶೇ.51.18ರಷ್ಟು ದಾಖಲಾಯಿತು.
ಶಿಕ್ಷಕರ ಕ್ಷೇತ್ರದಲ್ಲಿ ಬೈಂದೂರಿನಲ್ಲಿ 134 ಮಂದಿ ಮತದಾರರಲ್ಲಿ 120, ಶಂಕರನಾರಾಯಣದಲ್ಲಿ 146ರಲ್ಲಿ 114, ಕುಂದಾಪುರ 268ರಲ್ಲಿ 255, ಬ್ರಹ್ಮಾವರ 456ರಲ್ಲಿ 367, ಮಣಿಪಾಲ 479ರಲ್ಲಿ 284, ಉಡುಪಿ 533ರಲ್ಲಿ 398, ಕಾಪು 298ರಲ್ಲಿ 238, ಅಜೆಕಾರು 93ರಲ್ಲಿ 75 ಹಾಗೂ ಕಾರ್ಕಳದಲ್ಲಿ 362 ಮತದಾರರಲ್ಲಿ 308 ಮಂದಿ ಮತ ಚಲಾಯಿಸಿದರು. ಕುಂದಾಪುರ ಮತಗಟ್ಟೆಯಲ್ಲಿ ಅತ್ಯಧಿಕ ಶೇ.95.51 ಮಂದಿ ಮತ ಚಲಾಯಿಸಿದರೆ, ಮಣಿಪಾಲ ಮತಗಟ್ಟೆಯಲ್ಲಿ ಅತೀ ಕಡಿಮೆ ಅಂದರೆ ಶೇ.59.29ರಷ್ಟು ಮತ ದಾನವಾಯಿತು.