×
Ad

ಶಂಕರನಾರಾಯಣ: ಮತದಾರರ ಎದುರೇ ಮಳೆಗೆ ಕುಸಿದ ಕಾಲೇಜು ಕಟ್ಟಡ

Update: 2018-06-08 22:13 IST

ಉಡುಪಿ, ಜೂ.8: ನಿನ್ನೆಯಿಂದ ಉಡುಪಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 14.4 ಸೆ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 13.3 ಸೆ.ಮಿ., ಕುಂದಾಪುರದಲ್ಲಿ 15.7ಸೆ.ಮೀ., ಕಾರ್ಕಳದಲ್ಲಿ 14.1 ಸೆ.ಮೀ.. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಸತತ ಮಳೆಯಿಂದ ಅಲ್ಲಲ್ಲಿ ಮರ ಬಿದ್ದು, ಸಾರ್ವಜನಿಕ ಸೊತ್ತುಗಳಿಗೆ, ಮನೆಗಳಿಗೆ ಹಾನಿಯಾದ ಬಗ್ಗೆಯೂ ವರದಿಗಳು ಬಂದಿವೆ. ಭಾರೀ ಮಳೆಗೆ ಶಂಕರನಾರಾಯಣ ಪದವಿ ಪೂರ್ವ ಕಾಲೇಜಿನ ಶಿಥಿಲಾವಸ್ಥೆಯ ಹಳೆಯ ಕಟ್ಟಡದ ಒಂದು ಭಾಗ ಇಂದು ಬೆಳಗ್ಗೆ 10:30ರ ಸುಮಾರಿಗೆ ಧರಾಶಾಯಿ ಯಾಯಿತು. ಮಳೆಯ ಕಾರಣ ಕಾಲೇಜಿಗೆ ಇಂದು ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ತರಗತಿಗೆ ಬಂದಿರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

ಇಂದು ನಡೆದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ವಂಡ್ಸೆ ಹೋಬಳಿಯ ಶಂಕರನಾರಾಯಣ ಪದವಿ ಪೂರ್ವ ಕಾಲೇಜು ಏಕೈಕ ಮತದಾನ ಕೇಂದ್ರವಾಗಿದ್ದು, ತಮ್ಮ ಮತ ಚಲಾಯಿಸಲು ಮತದಾರರಾದ ಪದವೀಧರರು ಹಾಗೂ ಶಿಕ್ಷಕರು ಬಂದಿದ್ದಾಗ, ಅವರ ಸಮ್ಮುಖದಲ್ಲೇ ಕಾಲೇಜಿನ ಹಳೆ ಕಟ್ಟಡದ ಒಂದು ಭಾಗ ಕುಸಿದುಬಿತ್ತು. ಕಾಲೇಜು ಸ್ಥಾಪನೆಯಾಗಿ ಆರು ದಶಕಗಳು ಕಳೆದಿದ್ದು, ಕಟ್ಟಡ ಶಿಥಿಲವಾದ ಬಗ್ಗೆ ಇಲಾಖೆಗೆ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಊರವರು ದೂರಿದ್ದಾರೆ.

ಉಳಿದಂತೆ ಉಡುಪಿ ಕಡೆಕಾರು ಗ್ರಾಮದ ಶೀಲಾಕುಂದರ್ ಅವರ ಮನೆಯ ಮೇಲೆ ಮರ ಬಿದ್ದು 20,000ರೂ, ಬಿಟ್ಟು ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿ 60,000ರೂ. ನಷ್ಟ ಸಂಭವಿಸಿದೆ. ಕುತ್ಪಾಡಿಯ ರಾಜು ಅವರ ಮನೆ ಮೇಲೆ ಮರ ಬಿದ್ದು 45,000ರೂ.ನಷ್ಟವಾಗಿದೆ.

ಇನ್ನು ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಎಂಬಲ್ಲಿ ಬಾಲಕೃಷ್ಣ ಎಂಬವರ  ಮನೆಯ ಮೇಲೆ ಮರ ಬಿದ್ದು 15,000 ರೂ., ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಶಂಕರ ಎಂಬವರ ಮನೆ ಮೇಲೆ ಮರ ಬಿದ್ದು 50,000ರೂ. ಹಾಗೂ ಕಟ್‌ಬೆಲ್ತೂರು ಗ್ರಾಮದ ಪಾರ್ವತಿ ಎಂಬವರ ಮನೆ ಮೇಲೆ ಮರ ಬಿದ್ದು 20,000ರೂ. ಹಾನಿಯಾಗಿದೆ.

ಭಾರೀ ಮಳೆಯ ಎಚ್ಚರಿಕೆ

ರಾಜ್ಯದ ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಈ ಅವಧಿಯಲ್ಲಿ 11 ಸೆ.ಮಿ.ನಿಂದ 20ಸೆ.ಮಿ.ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಜೂ.11ರ ಬಳಿಕ ಮಳೆಯ ಬಿರುಸು ಕಡಿಮೆಗೊಳ್ಳುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News