×
Ad

ಜಿಎಸ್‌ಟಿ ವ್ಯಾಪ್ತಿಗೆ ನೈಸರ್ಗಿಕ ಅನಿಲ?

Update: 2018-06-08 22:31 IST

ಹೊಸದಿಲ್ಲಿ, ಜೂ.8: ಜಿಎಸ್‌ಟಿ ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ನೈಸರ್ಗಿಕ ಅನಿಲವನ್ನು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೊಳಪಡಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಮಂಡಳಿಯ ಜಂಟಿ ಕಾರ್ಯದರ್ಶಿ ಧೀರಜ್ ರಸ್ತೋಗಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಪಂಜಾಬ್, ಹರ್ಯಾಣ,ದಿಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಏರ್ಪಡಿಸಿದ್ದ ಜಿಎಸ್‌ಟಿ ಕುರಿತು ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು,ಐದು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ವೈಮಾನಿಕ ಇಂಧನ(ಎಟಿಎಫ್)ವೂ ಜಿಎಸ್‌ಟಿ ವ್ಯಾಪ್ತಿಗೆ ಬರಬಹುದಾದ ಇನ್ನೊಂದು ಉತ್ಪನ್ನವಾಗಬಹುದು ಎಂದು ಹೇಳಿದರು.

ನೈಸರ್ಗಿಕ ಅನಿಲವನ್ನು ಪ್ರಾಯೋಗಿಕ ನೆಲೆಯಲ್ಲಿ ಜಿಎಸ್‌ಟಿ ವ್ಯಾಪ್ತಿಗೊಳಪಡಿಸುವ ಪ್ರಸ್ತಾವವೊಂದನ್ನು ಮುಂಬರುವ ಜಿಎಸ್‌ಟಿ ಮಡಳಿಯ ಸಭೆಯ ಮುಂದೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರಾದರೂ ನೈಸರ್ಗಿಕ ಅನಿಲ ಮತ್ತು ಎಟಿಎಫ್ ಅನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸಲು ನಿರ್ದಿಷ್ಟ ಕಾಲಮಿತಿಯನ್ನು ತಿಳಿಸಲಿಲ್ಲ.

ಸೀಮೆಎಣ್ಣೆ,ನಾಫ್ತಾ ಮತ್ತು ಎಲ್‌ಪಿಜಿಯಂತಹ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲಾಗಿದ್ದರೂ,ಆರಂಭದ ವರ್ಷಗಳಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ,ಎಟಿಎಫ್,ಡೀಸಿಲ್ ಮತ್ತು ಪೆಟ್ರೋಲ್‌ಗಳನ್ನು ಈ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.

ಪೆಟ್ರೋಲಿಯಂ ಕೇಂದ್ರ ಮತ್ತು ರಾಜ್ಯಗಳಿಗೆ ಆದಾಯದ ಬೃಹತ್ ಮೂಲವಾಗಿದೆ. ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೆಲಮಟ್ಟಿಗೆ ಸಹಮತವು ಮೂಡಿಬಂದಿದೆ. ಹೀಗಾಗಿ ಅದು ಜಿಎಸ್‌ಟಿ ವ್ಯಾಪ್ತಿಗೆ ಸೇರಬಹುದು ಎಂದು ರಸ್ತೋಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News