×
Ad

ವಸತಿ ರಹಿತ ಬಡವರಿಗೆ ಅನುಕೂಲ ಕಲ್ಪಿಸಲು ಚಿಂತನೆ: ಸಚಿವ ಯು.ಟಿ.ಖಾದರ್‌

Update: 2018-06-09 20:49 IST

ಮಂಗಳೂರು, ಜೂ. 9: ವಸತಿ ಯೋಜನೆಯ ಆದಾಯ ಮಿತಿಯನ್ನು ಹೆಚ್ಚಿಸಿ, ಬಡವರಿಗೆ ಅನುಕೂಲವಾಗುವಂತೆ ಪರಿಷ್ಕರಿಸುವ ಬಗ್ಗೆ ಹಾಗೂ ಯೋಜನೆಯ ನೀತಿಯನ್ನು ಸರಳಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸೋಮವಾರ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ವಸತಿ ಯೋಜನೆಯ ಫಲಾನುಭವಿಗಳಾಗ ಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 32 ಸಾವಿರ ರೂ. ಆದಾಯ ಮಿತಿಯೊಳಗಿರಬೇಕು ಮತ್ತು ನಗರ ಪ್ರದೇಶದಲ್ಲಿ ಒಂದು ಲಕ್ಷ ರೂ. ಆದಾಯ ಮಿತಿಯೊಳಗಿರಬೇಕು ಎಂಬ ನಿಯಮವಿದೆ. ಇದರಿಂದಾಗಿ ಸಾಕಷ್ಟು ಬಡವರು ಈ ಯೋಜನೆಗೆ ಅರ್ಹರಾಗಿದ್ದರೂ ಆದಾಯದ ಮಿತಿಯ ನಿಯಮದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 700 ಚದರ ಅಡಿ ವಿಸ್ತೀರ್ಣದ ಸಣ್ಣ ಮನೆ ನಿರ್ಮಿಸುವ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ವಸತಿ ಯೋಜನೆಯ ನೀತಿಯನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಚಿಂತನೆ ಹೊಂದಿರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸಾರ್ಟ್ ಸಿಟಿ, ಎಡಿಬಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸ್ಥಳೀಯ ಬದಲಾವಣೆಗಳನ್ನು ಮಾಡಿಕೊಂಡು ಸಕಾರಾತ್ಮಕ ಚಿಂತನೆಯೊಂದಿಗೆ ಅನುಷ್ಠಾನಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಳೆ ಹಾನಿಯ ಬಗ್ಗೆ ಸಮಗ್ರವಾದ ವಿವರ ಸಂಗ್ರಹಿಸಿ ಪರಿಹಾರ ಸೂಕ್ತ ಪರಿಹಾರ ಬಿಡುಗಡೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ತಕ್ಷಣದ ಪರಿಹಾರ ನೀಡುವ ಕ್ರಮ ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದೆ ಎಂದು ಖಾದರ್ ತಿಳಿಸಿದ್ದಾರೆ.

ನಮ್ಮ ಕಚೇರಿಗೆ ಎಲ್ಲರೂ ಬನ್ನಿ ಜನರ ಕೆಲಸ ಮಾಡಲು ನಾವಿರುವವರು:- ವಿಜಯಪುರ ನಗರದ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ತಮ್ಮ ಕಚೇರಿಗೆ ಕೆಲವರು ಬರುವುದು ಬೇಡ (ಬುರ್ಖಾ ಮತ್ತು ಟೋಪಿದಾರಿಗಳು ಬರುವುದು ಬೇಡ )ಎನ್ನುವ ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ. ಶಾಸಕನಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಮತ ನೀಡಿದ ಮತದಾರರನ್ನು ಅವಮಾನಿಸುವ ಕೆಲಸಕ್ಕೆ ಇಳಿಯ ಬಾರದು. ನನ್ನ ಕಚೇರಿಗೆ ಎಲ್ಲರೂ ಬರಬಹುದು. ನನ್ನ ಪಕ್ಷದ ಕಚೇರಿಗೂ ಎಲ್ಲರೂ ಬರಬಹುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಅಭಿವೃದ್ಧಿ ಕೆಲಸದಲ್ಲಿ ರಾಜಕೀಯವಿಲ್ಲ

ಜಿಲ್ಲೆಯಲ್ಲಿ ಯಾವ ಪಕ್ಷದ ಶಾಸಕರಿದ್ದರೂ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕೆಂಬ ಗುರಿ ಇದೆ. ಅದರಲ್ಲಿ ರಾಜಕೀಯ ಮಾಡುವುದಿಲ್ಲ. ನಗರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಮೇಯರ್ ಭಾಸ್ಕರ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಉಪ ಮೇಯರ್ ಮುಹಮ್ಮದ್ ಕುಂಜತ್ತ ಬೈಲು, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕವಿತಾ ಸನಿಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News