ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಸಲ್ಲದು: ಅಶೋಕ್ ಕಾಮತ್
ಉಡುಪಿ, ಜೂ.9: ಇಂದು ಸರಕಾರಿ ಶಾಲೆಗಳಲ್ಲಿ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಹೆಚ್ಚು ಹಣ ಕೊಟ್ಟು ಓದುವ ಶಾಲೆಯೇ ಶ್ರೇಷ್ಠ ಎಂಬ ಭಾವನೆ ಪೋಷಕರಲ್ಲಿ ಮೂಡಿದೆ. ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ಸರಿಯಲ್ಲ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಹೇಳಿದ್ದಾರೆ.
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಾತೃ ಭಾಷೆಯ ಶಿಕ್ಷಣ ಶ್ರೇಷ್ಠವಾದುದು. ಮಕ್ಕಳಲ್ಲಿ ಜೀವನದ ಗುರಿ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಆದುದರಿಂದ ಮಕ್ಕಳಲ್ಲಿ ಪರ್ಯಾಯ ಮಾರ್ಗ ಗಳ ಯೋಚನೆಯನ್ನೂ ಬೆಳೆಸುವ ಅಗತ್ಯ ಇದೆ. ಪೋಷಕರು ಮಕ್ಕಳ ಆಸಕ್ತಿಯ ಮೇಲೆ ಒತ್ತಡ ಹೇರುವ ಕೆಲಸ ಮಾಡಬಾರದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಶೆಟ್ಟಿ, ಸೊಸೈಟಿಯ ಉಪಾಧ್ಯ್ಷ ಎಲ್.ಉಮಾನಾಥ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 3 ಲಕ್ಷ ರೂ. ವೌಲ್ಯದ ಸೌಲಭ್ಯಗಳನ್ನು ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು. ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.