‘ಮಾಧ್ಯಮಗಳ ಕರ್ತವ್ಯದಲ್ಲಿ ಸರಕಾರಗಳ ಹಸ್ತಕ್ಷೇಪ ಹೆಚ್ಚಳ’
ಮಣಿಪಾಲ, ಜೂ.9: ವಿಶ್ವದಾದ್ಯಂತ ಮಾಧ್ಯಮಗಳ ಕರ್ತವ್ಯನಿರ್ವಹಣೆ ಯಲ್ಲಿ ಸರಕಾರಗಳ ಹಸ್ತಕ್ಷೇಪದ ಪ್ರಮಾಣ ಕಳವಳಕಾರಿ ರೀತಿಯಲ್ಲಿ ಹೆಚ್ಚಳ, ಅಭಿವ್ಯಕ್ತಿ ಸ್ವಾತಂತ್ರ ಮೊಟಕುಗೊಳಿಸುವುದರೊಂದಿಗೆ ‘ರಾಷ್ಟ್ರೀಯ ಸುರಕ್ಷತೆ’ಯ ಹೆಸರಿನಲ್ಲಿ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರಿಕೆ, ಇಂಟರ್‌ನೆಟ್‌ಗಳನ್ನು ಹತ್ತಿಕ್ಕುವ ಪ್ರವೃತ್ತಿಯೂ ಹೆಚ್ಚುತ್ತಿದೆ ಎಂಬ ಗಂಭೀರ ವಿಷಯಗಳು ನಿನ್ನೆ ಇಲ್ಲಿ ಅನಾವರಣಗೊಂಡ ಮಾಧ್ಯಮಗಳ ಕುರಿತ ಯುನೆಸ್ಕೋ ವರದಿಯಲ್ಲಿ ಹೇಳಲಾಗಿದೆ.
ಮಣಿಪಾಲ ಮಾಹೆಯ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ (ಎಸ್‌ಒಸಿ)ನ ಆಶ್ರಯದಲ್ಲಿ ಮಣಿಪಾಲದ ಫಾರ್ಚ್ಯೂನ್ ಇನ್ ಹೊಟೇಲ್ ವ್ಯಾಲಿವ್ಯೆನಲ್ಲಿ ನಡೆದಿರುವ ಏಷ್ಯನ್ ಮೀಡಿಯಾ ಇನ್‌ರ್ಫಾಮೇಷನ್ ಎಂಡ್ ಕಮ್ಯುನಿಕೇಷನ್ (ಎಎಂಐಸಿ)ನ 26ನೇ ವಾರ್ಷಿಕ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ ‘ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಮಾಧ್ಯಮ ಗಳ ಬೆಳವಣಿಗೆಯಲ್ಲಿ ವಿಶ್ವ ಪ್ರವೃತ್ತಿಗಳು’ ವಿಷಯದ ಮೇಲಿನ ಯುನೆಸ್ಕೋ ವರದಿಯನ್ನು ಬಿಡುಗಡೆಗೊಳಿಸಲಾಯಿತು.
ಯುನೆಸ್ಕೋದ ಸಂವಹನ ಮತ್ತು ಮಾಹಿತಿ ಘಟಕದ ರಾಷ್ಟ್ರೀಯ ಯೋಜನಾಧಿಕಾರಿ ಅನಿರ್ಬನ್ ಶರ್ಮಾ ಅವರು ಅಮಿಕ್‌ನ (ಎಎಂಐಸಿ) ಪ್ರಧಾನ ಕಾರ್ಯದರ್ಶಿ ರಮೋನ್ ಗುಲೆರ್ಮೊ ಆರ್.ತುಜೋನ್ ಇವರಿಗೆ ವರದಿಯ ಪ್ರತಿಯೊಂದನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ವರದಿಯಲ್ಲಿ ವಿಶ್ವದಲ್ಲಿ ಕರ್ತವ್ಯನಿರತ ಪತ್ರಕರ್ತರ ಸುರಕ್ಷತೆಯ ಕುರಿತಂತೆ ಗಂಭೀರವಾದ ಚಿಂತೆಯನ್ನು ವ್ಯಕ್ತಪಡಿಸಲಾಗಿದೆ. ಪತ್ರಕರ್ತರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ 10ರಲ್ಲಿ 9 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗದಿರುವುದರತ್ತ ವರದಿ ಬೊಟ್ಟು ಮಾಡಿದೆ.
ವರದಿಯಲ್ಲಿ ಮಹಿಳಾ ಪತ್ರಕರ್ತರ ಸ್ಥಿತಿ-ಗತಿಯ ಕುರಿತಂತೆಯೂ ತೀರಾ ಕಳವಳಕರ ಸಂಗತಿಗಳನ್ನು ಬಹಿರಂಗ ಪಡಿಸಲಾಗಿದೆ. ಪತ್ರಿಕೋದ್ಯಮದಲ್ಲಿ ಈಗಲೂ ಮಹಿಳೆಯರು ಗಾಜಿನ ಒಳಮೈಯಲ್ಲಿ ಕೆಲಸ ಮಾಡುತಿದ್ದಾರೆ ಎಂದಿದೆ. ಮಾದ್ಯಮಗಳಲ್ಲಿ ಈಗಲೂ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ತಾರತಮ್ಯ ನೀತಿಗೆ ಬಲಿಪಶುವಾಗುತಿದ್ದಾರೆ. ಈಗಲೂ ನಾಲ್ವರಲ್ಲಿ ಓರ್ವ ಮಹಿಳೆ ಮಾತ್ರ ಮಾಧ್ಯಮದ ನಿರ್ಣಾಯಕ ಸ್ಥಾನವನ್ನು ಅಲಂಕರಿಸಿದ್ದರೆ, ಮೂವರು ವರದಿಗಾರರಲ್ಲಿ ಒಂದು ಸ್ಥಾನ ಮಾತ್ರ ಮಹಿಳಾ ವರದಿಗಾರರಿಗೆ ಸಿಗುತ್ತಿದೆ ಎಂದು ಯುನೆಸ್ಕೋ ವರದಿಯಲ್ಲಿ ತಿಳಿಸಲಾಗಿದೆ.
ಮಾದ್ಯಮಗಳಲ್ಲಿ ಇದೇ ರೀತಿಯ ತಾರತಮ್ಯ ಧೋರಣೆ ಮಹಿಳೆಯರಿಗೆ ಸಿಗುವ ಅವಕಾಶಗಳಲ್ಲೂ ಕಂಡುಬಂದಿದ್ದು, ತಜ್ಞ ಸಂದರ್ಶಕರಲ್ಲೂ ಐದರಲ್ಲಿ ಒಬ್ಬರು ಮಾತ್ರ ಮಹಿಳೆಯರಾಗಿರುತ್ತಾರೆ ಎಂದು ವರದಿ ಹೇಳಿದೆ.
ಉದ್ಘಾಟನೆ: ಸೋಷಿಯಲ್ ಮೀಡಿಯಾಗಳ ಸಹಿತ ನವ ಮಾಧ್ಯಮಗಳ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯವಿದ್ದು, ಆದರೆ ಇವುಗಳ ಕುರಿತು ಭಾರೀ ಆಶಾವಾದಗಳಾಗಲಿ, ನಿರಾಶೆಯಾಗಲಿ ಅಗತ್ಯವಿಲ್ಲ ಎಂದು ತಮಿಳುನಾಡು ಸೆಂಟ್ರಲ್ ವಿವಿಯ ಪ್ರೊ.ಸಂಜಯ್ ಬಾರ್ತೂರ್ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ಎಸ್‌ಒಸಿ ಆಶ್ರಯದಲ್ಲಿ ಮಣಿಪಾಲದ ಫಾರ್ಚ್ಯೂನ್ ಇನ್ ಹೊಟೇಲ್ ವ್ಯಾಲಿವ್ಯೆನಲ್ಲಿ ನಡೆದ ಏಷ್ಯನ್ ಮೀಡಿಯಾ ಇನ್‌ರ್ಫಾಮೇಷನ್ ಎಂಡ್ ಕಮ್ಯುನಿಕೇಷನ್ (ಅಮಿಕ್)ನ ‘ಏಷ್ಯದ ಗೊಂದಲದ ಸಹಸ್ರಮಾನ: ಕೆಲವು ಕಲಾತ್ಮಕ ಪ್ರತಿಕ್ರಿಯೆಗಳು’ ವಿಷಯದ ಕುರಿತು ನಡೆದ 26ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಶಿಖರೋಪನ್ಯಾಸದಲ್ಲಿ ಮಾತನಾಡುತಿದ್ದರು. ಸಮ್ಮೇಳನ ದಲ್ಲಿ 16 ದೇಶಗಳ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ವಾಟ್ಸಪ್, ಫೇಸ್‌ಬುಕ್, ಟ್ವಿಟರ್‌ಗಳನ್ನು ಇಂದು ವ್ಯಾಪಕವಾಗಿ ಬಳಸುವ ಯುವ ಜನತೆಯಲ್ಲಿ ತಾಳ್ಮೆ ಎಂಬುದಿಲ್ಲ. ಇದರಿಂದ ದುಷ್ಪರಿಣಾಮ, ಹಾನಿ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ಅತ್ಯಂತ ವೇಗವಾಗಿರುವ ಇಂದಿನ ನವ ಮಾಧ್ಯಮಗಳ ಕುರಿತು ಎಚ್ಚರಿಕೆ ಅಗತ್ಯ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಪತ್ರಿಕೆ ಹಾಗೂ ಪತ್ರಕರ್ತರು ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರಬೇಕು ಹಾಗೂ ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸ್ವಸ್ಥ ಸಮಾಜ ಸಾಧ್ಯ ಎಂದರು.
ಅಮಿಕ್ ಸಂಸ್ಥೆಯ ನಿರ್ದೇಶಕ ಮಂಡಳಿ ಮುಖ್ಯಸ್ಥ ಕ್ರಿಸ್ಪಿನ್ ಸಿ.ಮೆಸ್ಲೋಗ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರೆ, ಹೈದರಾಬಾದ್ ವಿವಿಯ ಪ್ರೊ ವೈಸ್‌ಚಾನ್ಸಲರ್ ಪ್ರೊ.ಬಿ.ಪಿ.ಸಂಜಯ್ ಉಪಸ್ಥ್ಝಿತರಿದ್ದರು. ಎಸ್‌ಒಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ಕಾರ್ಯಕ್ರಮ ನಿರೂಪಿಸಿದರು.